ಗ್ಯಾಂಗ್ಟಾಕ್ (ಸಿಕ್ಕಿಂ), ಮಂಗಳವಾರ, 31 ಮಾರ್ಚ್ 2009( 11:51 IST )
IFM
ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪಾಸ್ಪೋರ್ಟ್ ಸೈಜಿನ ಫೋಟೋ ಇಲ್ಲಿನ ಮಹಿಳಾ ಮತದಾರರೊಬ್ಬರ ಗುರುತಿನ ಚೀಟಿಯಲ್ಲಿ ಅಚ್ಚಾಗಿದೆ. ತನ್ನ ಫೋಟೋ ಇರುವ ಜಾಗದಲ್ಲಿ ಅಮಿತಾಬ್ ಬಚ್ಚನ್ ಫೋಟೋ ಕಂಡು ಸಹಜವಾಗಿಯೇ ಆ ಮಹಿಳೆಗೆ ಚುನಾವಣಾ ಅಧಿಕಾರಿಗಳ ತಪ್ಪು ಗೊತ್ತಾದರೂ ಅಚ್ಚರಿಯೂ ಆಗಿದೆ.
ಎಲೆಕ್ಟ್ರಾನಿಕ್ ಫೋಟೋ ಐಡೆಂಟಿಟಿ ಕಾರ್ಡ್ ಪಡೆಯಲು ಸಿಕ್ಕಿಂನ ಪೂರ್ವ ವಲಯದಲ್ಲಿ ಮಹಿಳೆ ಹೋದರೆ, ಆಕೆಯ ಫೋಟೋ ಇರುವ ಜಾಗದಲ್ಲಿ ಬಿಳಿಗಡ್ಡ ಬಿಟ್ಟ ಅಮಿತಾಬ್ ಬಚ್ಚನ್ ಅವರ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ ಅಚ್ಚಾಗಿತ್ತು. ನಂತರ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆದ ತಪ್ಪು ಅವರಿಗೆ ಮನವರಿಕೆಯಾಗಿದ್ದು, ಗುರುತಿನ ಚೀಟಿಯನ್ನು ಸರಿಮಾಡಿ ನೀಡುವ ಭರವಸೆ ನೀಡಿದ್ದಾರೆ. ವಿಶೇಷವೆಂದರೆ ಈ ಮಹಿಳೆಯ ವಯಸ್ಸು 67 ಆಗಿದ್ದು, ಅಮಿತಾಬ್ ಅವರದ್ದೂ ಇದೇ ವಯಸ್ಸು.
ಜಂಟಿ ಮುಖ್ಯ ಚುನಾವಣಾ ಅಧಿಕಾರಿ ತಮ್ಮಿಂದಾಗಿರುವ ದೋಷವನ್ನು ಸರಿಪಡಿಸುವುದಾಗಿ ತಿಳಿಸಿದ್ದಾರೆ. ಜತೆಗೆ ಮಹಿಳೆಗೆ ಪ್ರತ್ಯೇಕ ಗರುತಿನ ಚೀಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ವಿಚಿತ್ರವೆಂದರೆ, ಮಹಿಳೆಯ ಫೋಟೋದ ಜಾಗದಲ್ಲಿ ಬಚ್ಚನ್ ಫೋಟೋ ಹೇಗೆ ನುಸುಳಿತು ಎಂಬುದು ಈಗಲೂ ಅವರಿಗೆ ಅರ್ಥವಾಗದೆ, ತಲೆ ಕೆರೆದುಕೊಳ್ಳುತ್ತಿದ್ದಾರಂತೆ. ಈ ಸುದ್ದಿ ಬಚ್ಚನ್ಗೆ ತಿಳಿದರೆ ಹೇಗೆ ಸ್ಪಂದಿಸುತ್ತಾರೋ!