ರಾಜಕೀಯದಲ್ಲಿ ಎಲ್ಲಾ ಮಾಯೆಯೋ.. ಶಿವನೇ..! ಮಂಗಳವಾರ, 31 ಮಾರ್ಚ್ 2009( 19:02 IST ) | |
ರಾಜಕೀಯದಲ್ಲಿ ಯಾವುದನ್ನೂ ನಂಬುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಲೆಕ್ಕಾಚಾರಗಳೇ ಅಡಿಮೇಲಾಗುತ್ತಿವೆ. ಯಾವ ಪಕ್ಷದ ಜತೆಗೆ ಯಾರಿದ್ದಾರೆ ಎಂಬುದೇ ಗೌಪ್ಯ. ಹಾಗೂ ಸುಲಭವಾಗಿ ಹೇಳಬಹುದಾದರೆ, ತಾಳಕ್ಕೆ ತಕ್ಕ ಮೇಳದಂತಿದೆ 2009ರ ಲೋಕಸಭಾ ಚುನಾವಣೆ.
ಉದಾಹರಣೆಗೆ ಉತ್ತರ ಪ್ರದೇಶದ ಮಾಯಾವತಿ, ತಮಿಳುನಾಡಿನ ಜಯಲಲಿತಾ ಅವರುಗಳು ಬಿಜೆಪಿಯಾಗಲಿ ಅಥವಾ ಎಡಪಕ್ಷಗಳ ಜತೆಗಾಗಲೀ ಗುರುತಿಸಿಕೊಳ್ಳದೆ ದೂರ ಉಳಿದಿವೆ. ಕೇವಲ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ ಮಾತ್ರ ಎಡಪಕ್ಷಗಳ ಜತೆ ಕೈ ಜೋಡಿಸಿದೆ. ಬಿಜೆಪಿಯ ಅತಿ ದೊಡ್ಡ ಮಿತ್ರಪಕ್ಷವಾಗಿರುವ ಬಿಜೆಡಿ ಬಿಜೆಪಿಯ ಸಹವಾಸವನ್ನೇ ತ್ಯಜಿಸಿದಂತಿದೆ. ಆದರೂ, ಬಿಜೆಡಿ ಅಧ್ಯಕ್ಷ ಹಾಗೂ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಕಾಂಗ್ರೆಸ್ಸಿಗಾಗಲೀ, ತೃತೀಯ ರಂಗಕ್ಕಾಗಲೀ ತನ್ನ ಬೆಂಬಲವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಉಕ್ತಿಯಂತೆ ಈಗ ಬಿಜೆಪಿ ಒರಿಸ್ಸಾದಲ್ಲಿ ಬಿಜಯ್ ಮಹಾಪಾತ್ರರಿಗೆ ಸೀಟು ಕರುಣಿಸಿದೆ.
ಒರಿಸ್ಸಾದ ಕೋಮುದಳ್ಳುರಿ ಬಹುಶಃ ಈ ಬಾರಿ ನವೀನ್‌ರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಲು ಬಿಡಲಿಕ್ಕಿಲ್ಲ ಎಂಬ ಲೆಕ್ಕಾಚಾರವೂ ಇದೆ. ಆದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ಪರ ಕೋಮಲ ಭಾವನೆಯನ್ನು ಹೊಂದಲು ಪ್ರೇರೇಪಿಸಿದೆ ಅನ್ನುವುದು ಗೊತ್ತಿಲ್ಲ. ಬಿಜೆಪಿಗೆ ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿ ದಳ, ಮಹಾರಾಷ್ಟ್ರದಲ್ಲಿ ಶಿವಸೇನೆ ಸಾಂಪ್ರದಾಯಿಕವಾಗಿ ಎಂದಿನಂತೆ ಬೆಂಬಲ ನೀಡಲಿವೆ. ಅಲ್ಲದೆ, ಅಲ್ಲದೆ ಈಶಾನ್ಯ ಭಾರತದಲ್ಲಿರುವ ಸಣ್ಣಪುಟ್ಟ ಪಕ್ಷಗಳಾದ ಅಸ್ಸಾಂ, ಮೇಘಾಲಯ, ಸಿಕ್ಕಿಂನ ಅಸೋಮ್ ಗಣ ಪರಿಷದ್ ಬೆಂಬಲವಿದೆ.
ದೆಹಲಿ, ಹರ್ಯಾಣ, ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶದ ಕೆಲವು ಭಾಗಗಳು, ಛತ್ತೀಸ್‌ಘಡ, ಬಿಹಾರ, ಗುಜರಾತ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಫಲಿತಾಂಶ ತೋರುವ ವಿಶ್ವಾಸವಿದೆ. ಈ ಲೆಕ್ಕಾಚಾರದಲ್ಲಿ ನೋಡಿದರೆ, ಪ್ರಧಾನಮಂತ್ರಿ ಗದ್ದುಗೆ ಏರುವ ಸಾಧ್ಯತೆ ಅಡ್ವಾಣಿಗಿದೆ ಎನ್ನಬಹುದು. ಆದರೆ, ಬಿಜೆಪಿಯ ನೋವು ಇರುವುದು ಕಾಂಗ್ರೆಸ್‌ನ ಹೆಚ್ಚುವ ಬಲದಲ್ಲಿ.
ಜಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಬಿಜೆಪಿ ಸಖ್ಯ ತೊರೆದು ಕಾಂಗ್ರೆಸ್ ಬೆಂಬಲಿಸಿರುವುದು, ಕಾಂಗ್ರೆಸ್‌ನ ಸದ್ಯದ ಗಳಿಕೆ. ಅಲ್ಲದೆ ಕಾಂಗ್ರೆಸ್ ಉತ್ತರ ಪ್ರದೇಶ, ಬಿಹಾರಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲಿದೆ. ಕಾಗ್ರೆಸ್ ಕೂಡಾ ತನ್ನ ಅತ್ಯುತ್ತಮ ಮಿತ್ರಪಕ್ಷಗಳಾದ ಲಾಲು ಪ್ರಸಾದ್ ಯಾದವರ ರಾಷ್ಟ್ರೀಯ ಜನತಾದಳ ಹಾಗೂ ರಾಮವಿಲಾಸ ಪಾಸ್ವಾನರ ಲೋಕಜನಶಕ್ತಿಯ ಬೆಂಬಲವನ್ನು ಈಗ ಕಳೆದುಕೊಂಡಿದೆ.
ದಕ್ಷಿಣದಲ್ಲೂ ಎಂದಿನ ಬೆಂಬಲವನ್ನು ಕಾಂಗ್ರೆಸ್ ಪಡೆಯಲು ಅಸಾಧ್ಯವೇ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳುವ ಪ್ರಕಾರ, ರಾಜಕೀಯವೆಂಬುದು ಸಾಧ್ಯಾಸಾಧ್ಯತೆಗಳ ಒಂದು ಕಲೆ. ಅದು ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಸಣ್ಣ ಸಣ್ಣ ತೊರೆಗಳು ನದಿಯನ್ನು ಸೇರಲೇಬೇಕು ಎನ್ನುತ್ತಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನ ಕೆಲಸು ಸೀಟುಗಳು ಕಾಂಗ್ರೆಸ್ ಪಾಲಿಗೆ ನಿಶ್ಚಿತ. ತಮಿಳುನಾಡಿನಲ್ಲೂ ಡಿಎಂಕೆ ಬಗ್ಗೆ ಕಾಂಗ್ರೆಸ್‌ಗೆ ಆಶಾವಾದವಿದೆ. ಮಹಾರಾಷ್ಟ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಶರದ್ ಪವಾರ್ ಜತೆಗೆ ಒಪ್ಪಂದವೇರ್ಪಟ್ಟಿದೆ.
ಒಟ್ಟಾರೆ, ರಾಜಕೀಯದಲ್ಲಿ ಏನೂ ಆಗಬಹುದು. ಹಾಗಾಗಿ 2009ರ ಲೋಕಸಭಾ ಚುನಾವಣೆಯೂ ಇದಕ್ಕೆ ಹೊರತೇನಲ್ಲ. ರಾಜಕೀಯ ಪಂಡಿತರ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ ಪಕ್ಷ ತನ್ನ ಹಳೆಯ ದೋಣಿ ಬಿಟ್ಟು ಮೇಲೇಳಲಾಗದು. ಕಾಂಗ್ರೆಸ್ 2004ರಲ್ಲಿ ಎದುರಾದಂತಹ ಪರಿಸ್ಥಿತಿಗಿಂತ ಭಿನ್ನವೇನೂ ಇರಲಾರದು ಎನ್ನುತ್ತಾರೆ. ಎಲ್ಲದಕ್ಕೂ ಮೇ 16ರವರೆಗೆ ಕಾಯಬೇಕು. ಅಲ್ಲಿವರೆಗೂ ಎಲ್ಲರ ದೃಷ್ಟಿ ಇದೇ ರಾಜಕಾರಣದತ್ತ.