ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಸಂಸದ ಅನಂತ ಕುಮಾರ್ ಎದುರು ಎಸ್.ಎಂ.ಕೃಷ್ಣ ಯಾಕೆ ಸ್ಪರ್ಧಿಸಿಲ್ಲ ಎಂಬ ಪ್ರಶ್ನೆಗೀಗ ಉತ್ತರ ದೊರೆತಿದೆ. ಕಳೆದ ವರ್ಷವಷ್ಟೆ ರಾಜ್ಯಸಭೆ ಪ್ರವೇಶಿಸಿದ್ದ ಕೃಷ್ಣ, ಲೋಕಸಭೆಗೂ ಸ್ಪರ್ಧಿಸಿದರೆ ರಾಜ್ಯಸಭೆಯ ಸ್ಥಾನವನ್ನು ಮರಳಿ ಪಡೆಯುವುದು ಕಾಂಗ್ರೆಸ್ ಪಾಲಿಗೆ ನುಂಗಲಾರದ ತುತ್ತಾಗುತ್ತದೆ.
ಎಸ್.ಎಂ.ಕೃಷ್ಣ ಹೆಸರು ಕೇಳಿ ಬರುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಭೈರೇಗೌಡ ಅವರು ಬಿಜೆಪಿಯ ಸಂಸದ ಅನಂತ್ ಕುಮಾರ್ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ. ಇದು ಕಾಂಗ್ರೆಸ್‌ನ ಯುವ ಧುರೀಣ ರಾಹುಲ್ ಗಾಂಧಿ ಸಲಹೆ.
ಈ ಮೊದಲು ಕಾಂಗ್ರೆಸ್ ಅನಂತ ಕುಮಾರ್ ಅವರ ಎದುರಾಳಿಯಾಗಿ ಎಸ್.ಎಂ.ಕೃಷ್ಣ ಅವರನ್ನು ಕಣಕ್ಕಿಳಿಸಲು ಚಿಂತಿಸಿತ್ತು. ಆದರೆ, ಪ್ರಣಬ್ ಮುಖರ್ಜಿ ಅವರ ವಾದದ ನಂತರ ಕೃಷ್ಣ ಹೆಸರನ್ನು ಕೈ ಬಿಡಲಾಯ್ತು. ಪ್ರಣಬ್ ಅವರ ವಾದವೇನೆಂದರೆ, ಕಳೆದ ವರ್ಷವಷ್ಟೇ ಎಸ್.ಎಂ.ಕೃಷ್ಣ ಅವರನ್ನು ರಾಜ್ಯಸಭೆಗೆ ಕರೆತರಲಾಗಿತ್ತು. ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿದರೆ ಪಕ್ಷ ಕಳೆದುಕೊಳ್ಳುವ ಆ ರಾಜ್ಯಸಭಾ ಸೀಟನ್ನು ಮತ್ತೆ ಪಡೆಯುವುದು ಬಹಳ ಕಷ್ಟ. ಜತೆಗೆ ಅದು ಸಾಧ್ಯವಾಗದ ಮಾತು ಎಂಬುದನ್ನು ಪ್ರಣಬ್ ಮುಖರ್ಜಿ ಒತ್ತಿ ಹೇಳಿದ್ದರು. ಹೀಗಾಗಿ ಸಭೆಯಲ್ಲಿ ಕೃಷ್ಣ ಅವರ ಹೆಸರು ಲೋಕಸಭೆ ಚುನಾವಣೆಯಲ್ಲಿ ಬರದಂತೆ ನೋಡಿಕೊಂಡರು ಎನ್ನುತ್ತವೆ ಉನ್ನತ ಮೂಲಗಳು.
ಇದಲ್ಲದೆ, ಅನಂತ ಕುಮಾರ್ ಎದುರು ನಿಲ್ಲುವ ಮನಸ್ಸು ಸ್ವತಃ ಕೃಷ್ಣ ಅವರಿಗೂ ಇರಲಿಲ್ಲ. ಯಾಕೆಂದರೆ, ಕೃಷ್ಣ ಅವರ ಮೊದಲಿನ ಕ್ಷೇತ್ರ ಮದ್ದೂರಿನಲ್ಲಿ ಕಳೆದ ಉಪಚುನಾವಣೆಯಲ್ಲಿ ಕೇವಲ 13,450 ಮತಗಳು ಮಾತ್ರ ಕಾಂಗ್ರೆಸ್ ಪಡೆಯಲು ಸಾಧ್ಯವಾಗಿತ್ತು. ಆಗ ಕೃಷ್ಣ ಅವರ ಸೋದರಳಿಯನನ್ನು ಮದ್ದೂರಿನಿಂದ ಕಣಕ್ಕಿಳಿಸಲಾಗಿತ್ತು.
ಬೆಂಗಳೂರು ದಕ್ಷಿಣದಲ್ಲಿ ಅನಂತ ಕುಮಾರ್ ಅವರ ಎದುರು ಕೃಷ್ಣ ಭೈರೇಗೌಡರನ್ನು ಕಣಕ್ಕಿಳಿಸಿರುವುದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಸಲಹೆಯಾಗಿತ್ತು. ಯುವ ನಾಯಕರನ್ನು ಗೆಲ್ಲಲು ಕಷ್ಟವಿರುವ ಪ್ರದೇಶದಲ್ಲಿ ಕಣಕ್ಕಿಳಿಸಲು ಅವರು ಸಲಹೆ ನೀಡಿದ್ದರು.
ಕಳೆದ ನವೆಂಬರ್‌ನಲ್ಲಿ ಪಕ್ಷದ ಟಿಕೆಟ್ ಮಾರಲಾಗಿದೆ ಎಂದು ಆರೋಪಿಸಿ ತನ್ನ ಪಕ್ಷದ ಎಲ್ಲ ಸ್ಥಾನಗಳನ್ನೂ ಕಳೆದುಕೊಂಡಿದ್ದ ಮಾರ್ಗರೆಟ್ ಆಳ್ವ ಈ ಬಾರಿ ಮತ್ತೆ ಕಾಂಗ್ರೆಸ್‌ನಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎಂ.ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಜಯಪ್ರಕಾಶ್ ಹೆಗ್ಡೆ, ಧ್ರುವ ನಾರಾಯಣ ಅವರುಗಳು ಉಡುಪಿ-ಚಿಕ್ಕಮಗಳೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರಗಳಿಂದ ಸ್ಪರ್ಧೆಗಿಳಿದಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆಯವರನ್ನು ಸೋಲಾಪುರ ಕ್ಷೇತ್ರದಿಂದ, ಸಂಜಯ್ ನಿರುಪಮ್ ಅವರಿಗೆ ಈ ಹಿಂದೆ ನಟ ಗೋವಿಂದ ಸ್ಪರ್ಧಿಸಿದ್ದ ಕ್ಷೇತ್ರ ಮುಂಬೈ ಉತ್ತರದಿಂದ ಟಿಕೆಟ್ ನೀಡಲಾಗಿದೆ.