ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತಮಿಳ್ನಾಡಿನಿಂದ ಇನ್ನೊಂದು 'ಬ್ರೇಕಿಂಗ್' ನ್ಯೂಸ್
ಮತಸಮರ
ಎಐಎಡಿಎಂಕೆ ಹಾಗೂ ವೈಕೋ ನೇತೃತ್ವದ ಎಂಡಿಎಂಕೆ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಉಂಟಾಗಿರುವ ಬಿರಕು ತೀವ್ರಗೊಂಡಿದ್ದು, ಇದು ಸಂಬಂಧ ಮುರಿಯುವ ಹಂತಕ್ಕೆ ತಲುಪಿದೆ ಎಂಬುದಾಗಿ ಎಂಡಿಎಂಕೆ ಪಕ್ಷದ ಮ‌ೂಲಗಳು ತಿಳಿಸಿವೆ.

ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಮತ್ತು ಎಂಡಿಎಂಕೆ ಮುಖಂಡ ವೈಕೋ ನಡುವೆ ಬುಧವಾರ ರಾತ್ರಿ ನಡೆದ ಬಹು ನಿರೀಕ್ಷಿತ ಸಭೆಯು ಹುಳಿಹುಳಿಯಾಗಿ ಮುಕ್ತಾಯಗೊಂಡಿದೆ. 'ಅಮ್ಮ' ಬರಿಯ ಮ‌ೂರು ಸೀಟುಗಳನ್ನು ಮಾತ್ರ ಕೊಡುತ್ತೇನೆ ಅಂದಿದ್ದಾರೆ. ವೈಕೋ ಅವರು ಕನಿಷ್ಠ ಐದು ಸ್ಥಾನಗಳಾದರೂ ಬೇಕು ಅಂತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಗಳ ನಂತರ ಎಂಡಿಎಂಕೆಯು ಎಐಎಡಿಎಂಕೆಯೊಂದಿಗೇ ಇತ್ತು.

ಅಮ್ಮ, ವೈಕೋ ಅವರ ಬೇಡಿಕೆಯನ್ನು ಪರಿಗಣಿಸುವುದಾಗಿ ಹೇಳಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತು? ಇದಕ್ಕೆ ಕಾರಣ ವೈಕೋ ಅವರೊಂದಿಗೆ ಎಲ್.ಕೆ. ಆಡ್ವಾಣಿ ನಡೆಸಿದ ದೂರವಾಣಿ ಮಾತುಕತೆ ಎಂದು ಹೇಳಲಾಗಿದೆ. ಬಿಜೆಪಿ ಮೈತ್ರಿಕೂಟಕ್ಕೆ ವೈಕೋರಿಗೆ ಆಹ್ವಾನ ನೀಡಿರುವ ಆಡ್ವಾಣಿ 15 ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದಾರಂತೆ. ಇದು ಗೊತ್ತಾದ ಅಮ್ಮ ಕಿಡಿಕಿಡಿಯಾಗಿದ್ದು, ಹೆಚ್ಚು ಸ್ಥಾನಗಳನ್ನು ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಗುರುವಾರ ರಾತ್ರಿಯೊಳಗಾಗಿ ಈ ಸೀಟು ಹಂಚಿಕೆ ನಿರ್ಧಾರವಾಗದಿದ್ದರೆ ಮೈತ್ರಿ ಮುರಿಯುವುದು ಖಂಡಿತ ಎಂಬುದು ಮೂಲಗಳ ಅಭಿಪ್ರಾಯ. ಇದೀಗಾಗಲೇ, ವೈಕೋ ಅವರ ಪಕ್ಷದ ಕಚೇರಿಯು ಪಕ್ಷದ ಕಾರ್ಯಕರ್ತರಿಗೆ ಬಾಯ್ಮಾತಿನ ಆಹ್ವಾನ ನೀಡಿದ್ದು, ಶುಕ್ರವಾರ ಸಭೆ ನಡೆಯಲಿದ್ದು, ಸಭೆಯಲ್ಲಿ ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.