ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಲಾಲೂ, ಮುಲಾಯಂ, ಪಾಸ್ವಾನ್ ಕೂಟ ಘೋಷಣೆ
ಮತಸಮರ
ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷಗಳು ತಮ್ಮ ಚುನಾವಣಾ ಪೂರ್ವ 'ಜಾತ್ಯತೀತ ಮೈತ್ರಿ'ಯನ್ನು ಘೋಷಿಸಿದ್ದು, ಇದು ಕಾಂಗ್ರೆಸ್ ಪಕ್ಷದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಿವೆ. ಹೊಸ ಮೈತ್ರಿಕೂಟವು ಯುಪಿಎಯ ಅವಿಭಾಜ್ಯ ಅಂಗವಾಗಿಯೇ ಇರಲಿದೆ ಮತ್ತು ಈ ಹಿಂದೆ ಒಪ್ಪಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮದನ್ವಯವೇ ಕಾರ್ಯವೆಸಗಲಿದೆ ಎಂದು ಈ ತ್ರಿಪಕ್ಷಗಳು ಸ್ಪಷ್ಟಪಡಿಸಿವೆ. ಅಲ್ಲದೆ ಮನಮೋಹನ್ ಸಿಂಗ್ ಅವರೇ ಯುಪಿಎಯ ಪ್ರಧಾನಿ ಅಭ್ಯರ್ಥಿ ಎಂದೂ ಹೇಳಿವೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್, ಆರ್‌ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಮತ್ತು ಎಲ್‌ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರುಗಳು ನಡೆಸಿದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಮ‌ೂರು ಪಕ್ಷಗಳು ಜತೆ ಸೇರಿರುವ ಕುರಿತು ಔಪಚಾರಿಕ ಘೋಷಣೆ ಮಾಡಲಾಯಿತು. ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಹಾಗೂ ಸಂಜಯ್ ದತ್ ಅವರೂ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರದಲ್ಲಿ ಮತೀಯ ಶಕ್ತಿಗಳು ಶಕ್ತವಾಗುವುದನ್ನು ತಪ್ಪಿಸಲು ಈ ಮ‌ೂರು ಪಕ್ಷಗಳು ಒಟ್ಟಾಗಿರುವುದಾಗಿ ಮುಲಾಯಂ ಸಿಂಗ್ ಹೇಳಿದರು. ಅಲ್ಲದೆ, ಬಡವರು, ದಲಿತರು, ತುಳಿತಕ್ಕೊಳಗಾದವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಕಾರ್ಯ ಮುಂದುವರಿಯಲಿದೆ ಎಂಬುದಾಗಿ ಅವರು ತಿಳಿಸಿದರು.

ಈ ಮ‌ೂರು ಪಕ್ಷಗಳ ಮೈತ್ರಿಯು ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಲ್ಲ, ಬದಲಿಗೆ ಮುಂಬರುವ ರಾಜ್ಯ ಶಾಸನಸಭಾ ಚುನಾವಣೆಗಳಿಗೂ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಈ ಮೈತ್ರಿಕೂಟಕ್ಕೂ ತೃತೀಯ ರಂಗಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನುಡಿದ ಲಾಲೂಪ್ರಸಾದ್ ಯಾದವ್, ಅವಕಾಶವಾದಿಗಳು ಮತ್ತು ಕೋಮುವಾದಿಗಳ ವಿರುದ್ಧ ಸಂಘಟಿತರಾಗಿದ್ದೇವೆ ಎಂದು ನುಡಿದರು. ಲಾಲೂ ಅವರ ಮಾತುಗಳನ್ನು ಎಲ್‌ಜೆಪಿ ನಾಯಕ ಪಾಸ್ವಾನ್ ಬೆಂಬಲಿಸಿದರು.