ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರಾಹುಲ್ ಸಂಪತ್ತು ವೃದ್ಧಿ: 5 ವರ್ಷಗಳಲ್ಲಿ 10 ಪಟ್ಟು!
ಮತಸಮರ
ಮೊದಲ ಬಾರಿಗೆ ಲೋಕಸಭೆಗೆ ಕಾಲಿಡುವುದಕ್ಕೆ ಮುನ್ನ ಕೇವಲ 22 ಲಕ್ಷ ರೂಪಾಯಿ ಇದ್ದ ಕಾಂಗ್ರೆಸ್‌ನ "ಭಾವೀ ಪ್ರಧಾನಿ", ಯುವ ನೇತಾರ ರಾಹುಲ್ ಗಾಂಧಿ ಕಳೆದ ಐದು ವರ್ಷಗಳಲ್ಲಿ ತಮ್ಮ ಘೋಷಿತ ಆದಾಯದ ಪ್ರಮಾಣವನ್ನು ಹತ್ತು ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಅಂದರೆ 2004ರಲ್ಲಿ ಚುನಾವಣೆಗೆ ನಿಲ್ಲುವಾಗ ಅವರು ಘೋಷಿಸಿದ ಸಂಪತ್ತಿನ ಮೌಲ್ಯ 22 ಲಕ್ಷ. ಈ 2009ರಲ್ಲಿ ಅವರ ಖಾಸಗಿ ಶ್ರೀಮಂತಿಕೆಯ ಅಧಿಕೃತ ಮೊತ್ತ 2.25 ಕೋಟಿ ರೂ.!

2004ರಲ್ಲಿ ಅವರ ಬ್ಯಾಂಕ್ ಠೇವಣಿ, ಯುಕೋ ಬ್ಯಾಂಕಿನಲ್ಲಿ 10.11 ಲಕ್ಷ ರೂ. ಮತ್ತು ಸಿಟಿ ಬ್ಯಾಂಕಿನಲ್ಲಿ 99 ಸಾವಿರ ರೂ. ಅಂತೆಯೇ ಇಂಗ್ಲೆಂಡಿನ ವೆಸ್ಟ್‌ಮಿನ್‌ಸ್ಟರ್ ಬ್ಯಾಂಕಿನಲ್ಲಿ ಅವರು 27,700 ಡಾಲರ್ (ಅಂದಾಜು ಹದಿಮೂರುಮುಕ್ಕಾಲು ಲಕ್ಷ ರೂ.) ಹಾಗೂ ಇನ್ನೆರಡು ಖಾತೆಗಳಲ್ಲಿ 19200 ಡಾಲರ್ (ಅಂದಾಜು ಒಂಬತ್ತುವರೆ ಲಕ್ಷ) ಹಾಗೂ 2700 ಡಾಲರ್ (ಅಂದಾಜು 1.35 ಲಕ್ಷ) ಅಷ್ಟಿತ್ತು. 3.9 ಲಕ್ಷ ರೂ.ಮೊತ್ತದ ಶೇರುಗಳು, 3.80 ಲಕ್ಷ ರೂ. ಮೊತ್ತದ ಜೀವವಿಮೆ ಮತ್ತಿತರ ಉಳಿತಾಯ ಸರ್ಟಿಫಿಕೆಟುಗಳು, 1.25 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ದೆಹಲಿಯಲ್ಲಿ 9.8 ಲಕ್ಷ ರೂ. ಮೊತ್ತದ ಫಾರ್ಮ್ ಹೌಸ್ ಇತ್ತು.

ಅದೇ 2009ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಘೋಷಣಾ ಪ್ರಮಾಣಪತ್ರದಲ್ಲಿ ಅವರ ವಿದೇಶೀ ಬ್ಯಾಂಕ್‌ನಲ್ಲಿಟ್ಟ ಠೇವಣಿಯ ಉಲ್ಲೇಖ ಇದ್ದಂತಿಲ್ಲ. ಅದರಲ್ಲಿ ಸಲ್ಲಿಸಿರುವ ವಿವರಗಳ ಪ್ರಕಾರ, 70 ಸಾವಿರ ರೂ. ನಗದು, ದೆಹಲಿಯ ಎಸ್‌ಬಿಐ, ಸಿಟಿ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕುಗಳಲ್ಲಿ ಒಟ್ಟು 11.5 ಲಕ್ಷ ರೂ. ಠೇವಣಿ, 10.2 ಲಕ್ಷ ರೂ. ಮೊತ್ತದ ಜೀವವಿಮೆ ಮುಂತಾದ ಉಳಿತಾಯ ಪತ್ರಗಳು, ಮೆಹ್ರೌಲಿಯಲ್ಲಿ 9.8 ಲಕ್ಷ ರೂ. ಮೌಲ್ಯದ ಜಮೀನು, ಹರ್ಯಾಣದ ಫರೀದಾಬಾದಿನಲ್ಲಿ 28 ಲಕ್ಷ ರೂ. ಮೌಲ್ಯದ ಆರು ಎಕರೆ ಜಮೀನು, 1.5 ಲಕ್ಷ ಒಡವೆ ಹಾಗೂ 1.63 ಕೋಟಿ ರೂಪಾಯಿ ಮೊತ್ತದಲ್ಲಿ ನವದೆಹಲಿಯ ಸಾಕೇತ್‌ನಲ್ಲಿ ಐಷಾರಾಮಿ ಮೆಟ್ರೋಪಾಲಿಟನ್ ಮಾಲ್‌ಗೆ ಅವರು ಒಡೆಯರಾಗಿದ್ದಾರೆ.

ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ.