ರಾಜ್ಯ ರಾಜಕಾರಣದ ಕುತೂಹಲಕಾರಿ ಬೆಳವಣಿಗೆ ಎಂಬಂತೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ ನಾಯಕ್ ಸೋಮವಾರ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ನಾಯಕ್ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
ಜಾತಿ ಪ್ರಮಾಣ ಪತ್ರ ಸಲ್ಲಿಕೆಯ ಗೊಂದಲದಿಂದಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜಾ ಅಮರೇಶ್ ನಾಯಕ್ ಹೈಕಮಾಂಡ್ ಆದೇಶದ ಮೇರೆಗೆ ಇಂದು ವಾಪಸ್ ಪಡೆದಿದ್ದು, ಬಿಜೆಪಿ ಎರಡನೇ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಚಿವ ಶ್ರೀರಾಮುಲು ಸಹೋದರ ಸಂಬಂಧಿ ಸಣ್ಣ ಫಕೀರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ ಎಂದು ಹೈಕಮಾಂಡ್ ಘೋಷಿಸಿದೆ.
ಹೈಕಮಾಂಡ್ ಆದೇಶದ ಮೇರೆಗೆ ರಾಜಾಅಮರೇಶ್ ನಾಯಕ್ ನಾಮಪತ್ರ ಹಿಂಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಬಲಿಗರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿ, ನಾಯಕ್ ಅವರಿಗೆ ಗೇಟ್‌ಪಾಸ್ ನೀಡುವ ಸಂಚಿನ ಹಿಂದೆ ಎಂಎಲ್‌ಸಿ ಮನೋಹರ್ ಮಸ್ಕಿ ಅವರ ಕೈವಾಡ ಇರುವುದಾಗಿ ಆರೋಪಿಸಿ, ಮಸ್ಕಿ ಮೇಲೆ ಹಲ್ಲೆಗೆ ಮುಂದಾದ ಘಟನೆಯೂ ನಡೆಯಿತು.
ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡ ಬಳಿಕ ರಾಜಾಅಮರೇಶ್ ನಾಯಕ್ ವಿರುದ್ಧ ವ್ಯವಸ್ಥಿತವಾದ ಸಂಚು ನಡೆಸುತ್ತಿದೆ. ಇದು ವಿರೋಧಿ ಗುಂಪುಗಳ ಕೈವಾಡವೇ ಎಂದು ನಾಯಕ್ ಬೆಂಬಲಿಗರು ಆಪಾದಿಸಿದ್ದಾರೆ. ಆದರೆ ನಾಯಕ್ ನಾಮಪತ್ರ ವಾಪಸು ಪಡೆಯುವ ಸಂಚಿನ ಹಿಂದೆ ಯಾರಿದ್ದಾರೆ ಎಂಬ ರಹಸ್ಯ ಇನ್ನಷ್ಟೇ ಬಹಿರಂಗವಾಗಬೇಕಿದೆ.