ಚುನಾವಣೆ08 | ಮತಸಮರ
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರೈತರಿಗೆ ವೇತನ-ಬಜರಂಗ ದಳ ನಿಷೇಧ: ಜೆಡಿಎಸ್ ಪ್ರಣಾಳಿಕೆ
ಮತಸಮರ
ರಾಷ್ಟ್ರೀಯ ಬ್ಯಾಂಕುಗಳ ಸಾಲ ನೀತಿ ತಿದ್ದುಪಡಿ, ಗ್ರಾಮೀಣ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಗ್ರಾಮೀಣ ಬಡಜನರಿಗೆ ಗೃಹ ನೀತಿ, ಶ್ರೀರಾಮಸೇನೆ ಮತ್ತು ಬಜರಂಗದಳ ನಿಷೇಧ ಸೇರಿದಂತೆ ಹಲವು ಭರವಸೆಗಳ ಪ್ರಣಾಳಿಕೆಯನ್ನು ಲೋಕಸಭೆ ಚುನಾವಣೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೋಮವಾರ ಬಿಡುಗಡೆ ಮಾಡಿದರು.

ಅಲ್ಲದೇ ಸಮಗ್ರ ಆರೋಗ್ಯ ವಿಮೆ, ಸಹಕಾರ ಸಂಘಗಳಿಂದ ಪಡೆದ ಸಣ್ಣ ಮತ್ತು ಮಧ್ಯಮ ರೈತರ ಸಾಲ ಮನ್ನಾ ನೀರಾವರಿಗೆ ವಿಶೇಷ ಆದ್ಯತೆ, 60ವರ್ಷ ಮೇಲ್ಪಟ್ಟ ರೈತರಿಗೆ ತಿಂಗಳಿಗೆ ಮಾಸಿಕ 500ರೂ. ವೇತನ ಸೇರಿದಂತೆ ಹಲವು ಯೋಜನೆಗಳು ಜೆಡಿಎಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಸೇರಿದೆ.

ನವದೆಹಲಿಯಲ್ಲಿ ಇಂದು ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾಗಿ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಪ್ರಣಾಳಿಕೆಯನ್ನು ಹೊರತಂದಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಪ್ರತಿಯೊಬ್ಬರ ಕಣ್ಣೀರು ಒರೆಸುವುದು ಪಕ್ಷದ ಮುಖ್ಯ ಗುರಿ ಎಂಬ ಶೀರ್ಷಿಕೆಯೊಂದಿಗೆ ಹೊರ ತಂದಿರುವ ಪ್ರಣಾಳಿಕೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ನೀಡಿರುವಂತೆ ಅಕ್ಕಿ ವಿತರಣೆ ಬಗ್ಗೆ ಪ್ರಸ್ತಾಪವಿಲ್ಲ. ಬದಲಿಗೆ ಗ್ರಾಮೀಣ ಜನರ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ, ರೈತರ ಬದುಕನ್ನು ಸುಧಾರಿಸುವುದು, ಅಲ್ಪಸಂಖ್ಯಾತರಿಗೆ ಒತ್ತು, ನಿರುದ್ಯೋಗ ತೊಡೆದು ಹಾಕಲು ಹೊಸ ಯೋಜನೆಗಳು ಸೇರಿದಂತೆ ಹಲವು ಭರವಸೆಗಳು ಇವೆ.
1991ರಿಂದ ಸಹಕಾರಿ ಬ್ಯಾಂಕ್‌ಗಳಲ್ಲಿ ಪಡೆದಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಾಲ ಮನ್ನಾ ಮಾಡಲಾಗುವುದು, ಇದಕ್ಕಾಗಿ ಖಾಸಗಿ ಲೇವಾದೇವಿದಾರರನ್ನು ಹದ್ದುಬಸ್ತಿನಲ್ಲಿಡಲು ಪ್ರಾಧಿಕಾರ ರಚಿಸಲಾಗುವುದು.

ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಶೇ.5ರ ದರದಲ್ಲಿ ಸಾಲ ವಿತರಣೆ, ಎಸ್ಸಿ, ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳು ವಿದೇಶಗಳಲ್ಲಿ ಕೈಗೊಳ್ಳುವ ಶಿಕ್ಷಣಕ್ಕೆ ಬ್ಯಾಂಕ್ ಮೂಲಕ ಸಾಲ ನೀಡಲಾಗುವುದು. ಮಹಿಳಾ ಮೀಸಲಾತಿಗೆ ಮಸೂದೆಗೆ ಸಂಸತ್‌ನಲ್ಲಿ ಬೆಂಬಲ ನೀಡಲಾಗುವುದು.

ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುವಾದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಶ್ರೀರಾಮಸೇನೆ, ಬಜರಂಗದಳವನ್ನು ನಿಷೇಧಿಸಲಾಗುವುದು. 60ವರ್ಷ ಮೇಲ್ಪಟ್ಟ ಕಲಾವಿದರ ಕುಟುಂಬಕ್ಕೆ ಒಂದು ಸಾವಿರ ರೂ. ಮಾಸಿಕ ವೇತನ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.