ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಯುಪಿಎ ಮತಗಳಿಕೆಗಾಗಿ ಅಫ್ಜಲ್ ಗಲ್ಲು ವಿಳಂಬಿಸುತ್ತಿದೆ: ಆಡ್ವಾಣಿ
ಮತಸಮರ
ಅಹಮದಾಬಾದ್: ಅಫ್ಜಲ್ ಗುರು ಒಬ್ಬ ಆನಂದ್ ಸಿಂಗ್ ಅಥವಾ ಆನಂದ್ ಮೋಹನ್ ಆಗಿರುತ್ತಿದ್ದರೆ, ಆತನನ್ನು ಇಷ್ಟರಲ್ಲಿ ನೇಣಿಗೇರಿಸಿ ಆಗುತ್ತಿತ್ತು. ಆದರೆ ಆತ ಅಫ್ಜಲ್ ಆಗಿರುವುದಕ್ಕೆ ಈನ್ನೂ ಆತನ ಶಿಕ್ಷೆ ಜಾರಿಯಾಗಿಲ್ಲ ಎಂದು ಬಿಜೆಪಿಯ ಹಿರಿಯ ರಾಜಕಾರಣಿ, ಪ್ರಧಾನಿ ಅಭ್ಯರ್ಥಿ ಎಲ್.ಕೆ. ಅಡ್ವಾಣಿ ಹೇಳಿದ್ದಾರೆ.

ಅಫ್ಜಲ್ ಗುರುವನ್ನು ನೇಣಿಗೇರಿಸುವುದರಿಂದ ಮತಗಳಿಕೆಗೆ ಅಡ್ಡಿಯಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಯುಪಿಎ ಸರ್ಕಾರ ಆತನ ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬಗೊಳಿಸುತ್ತಿದೆ ಎಂದು ಟೀಕಿಸುವ ಮೂಲಕ ಅಡ್ವಾಣಿ ಮತ್ತೆ ಅಫ್ಜಲ್ ವಿಚಾರವನ್ನು ಕೆದಕಿದ್ದಾರೆ.

"ಸಂಸತ್ತಿನ ಮೇಲೆ ದಾಳಿ ಮತ್ತು ಅಕ್ಷರಧಾಮದ ಮೇಲೆ ದಾಳಿಯು ನಾನು ಗೃಹಸಚಿವನಾಗಿದ್ದಾಗ ನಡೆದಿತ್ತು ಎಂದು ಅವರು(ಯುಪಿಎ) ಹೇಳುತ್ತಿದ್ದಾರೆ. ನಾನಿದಕ್ಕೆ ಹೌದೆಂದು ಹೇಳುತ್ತೇನೆ, ಮತ್ತು ಇದನ್ನು ನಾನು ಒಪ್ಪುತ್ತೇನೆ. ಆದರೆ ಈ ಪ್ರಕರಣದಲ್ಲಿ ನಾವೇನು ಮಾಡಿದ್ದೇವೆ ಎಂಬುದನ್ನು ಗಮನಿಸಿ. ನಾವು ಈ ದಾಳಿಯ ಸಂಚುಕೋರರನ್ನು ಹಿಡಿದು ಅವರನ್ನು ಕಾನೂನಿನ ಕಟಕಟೆಗೆ ತಂದಿದ್ದೇವೆ ಮತ್ತು ನ್ಯಾಯಾಲಯ ಇವರನ್ನು ದೋಷಿಗಳೆಂದು ತೀರ್ಮಾನಿಸಿ ಗಲ್ಲು ಶಿಕ್ಷೆಯ ತೀರ್ಪು ನೀಡಿದೆ" ಎಂಬುದಾಗಿ ಹೇಳಿದರು. ಅವರು ಅಹಮದಾಬಾದಿನ ಹೊಸ ವಡಾಜ್ ಪ್ರದೇಶದ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಿದ್ದರು.

"ಸಂಚಿನ ಪ್ರಮುಖ ಆರೋಪಿಗೆ ಮರಣದಂಡನೆ ವಿಧಿಸಲಾಗಿದೆ. ಆತ ಉಚ್ಚನ್ಯಾಯಾಲಗಳಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ, ಅದನ್ನು ತಿರಸ್ಕರಿಸಲಾಗಿದೆ. ಆದರೂ ಯುಪಿಎ ಆತನನ್ನು ಗಲ್ಲಿಗೇರಿಸಲಿಲ್ಲ. ಆತ(ಅಫ್ಜಲ್) ಆನಂದ್ ಸಿಂಗ್ ಅಥವಾ ಆನಂದ್ ಮೋಹನ್ ಆಗಿರುತ್ತಿದ್ದರೆ ಇಷ್ಟರಲ್ಲಿ ಆತನನ್ನು ನೇಣಿಗೇರಿಸಿ ಆಗುತ್ತಿತ್ತು. ಆತ ಅಫ್ಜಲ್ ಗುರು ಆಗಿರುವುದಕ್ಕೆ ಆತನನ್ನು ಗಲ್ಲಿಗೇರಿಸಲಿಲ್ಲವೇ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ನಾನು ಕೇಳಲು ಬಯಸುತ್ತೇನೆ" ಎಂದವರು ಕೇಳಿದ್ದಾರೆ.

"ಈ ಕುರಿತು ನಾನು ಮುಸ್ಲಿಂ ಸಹೋದರರೊಂದಿಗೆ ಮಾತನಾಡಿದ್ದೇನೆ. ಅವರಿಗೂ ಈ ನಿರ್ಧಾರ ಪಥ್ಯವಾಗಿಲ್ಲ. ನಮ್ಮ ಹೆಸರು ಬಳಸಿ ಸರ್ಕಾರವು ತಪ್ಪುಕೆಲಸ ಮಾಡುತ್ತಿದೆ. ನಾವು ಉಗ್ರರನ್ನು ಶಿಕ್ಷಿಸಬೇಡಿ ಎಂದು ಹೇಳುತ್ತಿಲ್ಲ ಎಂದು ಅವರು ದೂರುತ್ತಿದ್ದಾರೆ" ಎಂದು ಆಡ್ವಾಣಿ ಹೇಳಿದ್ದಾರೆ.