ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮತ್ತೆ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವುದು ಶಿವಮೊಗ್ಗ ಕ್ಷೇತ್ರ, ವರ್ಣರಂಜಿತ ರಾಜಕಾರಣಿ, ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತ ಸಾರೆಕೊಪ್ಪ ಬಂಗಾರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಯುವ ನೇತಾರ, ಉದ್ಯಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಕಣದಲ್ಲಿದ್ದಾರೆ. 76ರ ಹರೆಯದ ಬಂಗಾರಪ್ಪ ಹಾಗೂ 28ರ ಹರೆಯದ ರಾಘವೇಂದ್ರ ನಡುವೆ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ನಡೆದಿದೆ.
1932ರಲ್ಲಿ ಜನಿಸಿದ ಬಂಗಾರಪ್ಪ ಬಿ.ಎ, ಬಿಎಲ್ ಪದವೀಧರರು, 1967ರಲ್ಲಿ ಸಮಾಜವಾದಿ ಚಳವಳಿಯ ಮೂಲಕ ರಾಜಕೀಯ ಜೀವನ ಆರಂಭಿಸಿದ್ದ ಅವರು, 1967ರಿಂದ 1996ರವರೆಗೂ ಶಾಸಕರಾಗಿದ್ದರು. 1967ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷದಿಂದ ಆಯ್ಕೆಗೊಂಡ ಬಂಗಾರಪ್ಪ, 1978ರಲ್ಲಿ ಇಂದಿರಾ ಕಾಂಗ್ರೆಸ್‌ಗೆ ಸೇರ್ಪಡೆ. 1983ರಲ್ಲಿ ಇಂದಿರಾ ಕಾಂಗ್ರೆಸ್ ತೊರೆದು, ಕಾಂಗ್ರೆಸ್ ವಿರುದ್ದ ಸಡ್ಡು ಹೊಡೆದು ಕ್ರಾಂತಿರಂಗ ಹುಟ್ಟು ಹಾಕುವ ಮೂಲಕ ತಮ್ಮ ಸೇಡು ತೀರಿಸಿಕೊಂಡಿದ್ದರು. 1985ರಲ್ಲಿ ಬಂಗಾರಪ್ಪ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದರು. 1994ರಲ್ಲಿ ಕಾಂಗ್ರೆಸ್ ಪುನಃ ಕಾಂಗ್ರೆಸ್ ತ್ಯಜಿಸಿ ಕರ್ನಾಟಕ ಕಾಂಗ್ರೆಸ್ ಪಕ್ಷ(ಕೆಸಿಪಿ) ಕಟ್ಟಿದ್ದರು. ತದನಂತರ ಕರ್ನಾಟಕ ವಿಕಾಸ ಪಕ್ಷ, 2004ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರಿ ಸಂಸದರಾಗಿ ಆಯ್ಕೆ, ಬಳಿಕ ಬಿಜೆಪಿ ಜತೆ ಮುನಿಸಿಕೊಂಡು, ಸಮಾಜವಾದಿ ಪಕ್ಷದ ಸೈಕಲ್ ಏರಿದ್ದರು. ಸೈಕಲ್ ಏರಿ ಸುಸ್ತಾದ ನಂತರ ಇದೀಗ ಮತ್ತೆ ಕಾಂಗ್ರೆಸ್ ಕೈ ಹಿಡಿದು ಅಖಾಡಕ್ಕಿಳಿದಿದ್ದಾರೆ.
NRB
ಹರಿತ ಮಾತಿನ ಬಂಗಾರಪ್ಪ 1990-92ರಲ್ಲಿ ಮುಖ್ಯಮಂತ್ರಿಯಾಗಿ, ಹಲವು ಬಾರಿ ಸಂಸದರಾಗಿ, ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಅನುಭವ ಹೊಂದಿರುವ ಅವರು 'ಪಕ್ಷದಿಂದ ಪಕ್ಷಕ್ಕೆ ವಲಸೆ' ಹೋದಾಗಲೂ ಕೂಡ ಮತದಾರರು ಬಂಗಾರಪ್ಪನ ವೈಯಕ್ತಿಕ ವರ್ಚಸ್ಸಿಗೆ ಆಶೀರ್ವಾದ ನೀಡಿದ್ದರು. ಆದರೆ ಇದೀಗ ಸಮಾಜವಾದಿ ಬಂಗಾರಪ್ಪ 'ಅವಕಾಶವಾದಿ ರಾಜಕಾರಣಿ' ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್‌ಗೆ ಬೈಯುತ್ತಲೇ ಬೇರೆ, ಬೇರೆ ಪಕ್ಷ ಕಟ್ಟಿದ್ದರು, ಸಮಾಜವಾದಿ ಪೋಸ್ ನೀಡುವ ಮೂಲಕ ಬಿಜೆಪಿ ವಿರುದ್ಧ ಕೆಂಡಕಾರುತ್ತಿದ್ದವರು ಕೊನೆಗೆ ಬಿಜೆಪಿ ಪಡಸಾಲೆ ಸೇರಿ ಅಲ್ಲಿಂದಲೂ ಹೊರಬಂದಿದ್ದಾರೆ. ಹೀಗೆ ಬಂಗಾರಪ್ಪನವರ ವರ್ಣರಂಜಿತ ವರ್ಚಸ್ಸು ಕುಂದಿದೆ. ಅವರ ಕ್ಷೇತ್ರದಲ್ಲಿ ಹೇಳಿಕೊಳ್ಳವಂತಹ ಕೆಲಸ ಆಗಿಲ್ಲ ಎಂಬುದಕ್ಕೆ ಆ ಕ್ಷೇತ್ರದ ಮತದಾರರ ಆಕ್ರೋಶವೇ ಸಾಕ್ಷಿ. ಇಷ್ಟು ವರ್ಷಗಳ ಕಾಲ ಬಂಗಾರಪ್ಪನವರು ಅಜಾತಶತ್ರು ಎಂಬಂತೆ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿ ಎನಿಸಿಕೊಂಡಿದ್ದರು ಕೂಡ 'ಆ' ಬಂಗಾರಪ್ಪ ಕಳೆದುಹೋಗಿರುವುದಂತೂ ಸತ್ಯ.
ಕ್ಷೇತ್ರ ಪುನರ್ ವಿಂಗಡಣೆ ನಂತರ ಮೊದಲ ಬಾರಿ ನಡೆಯುತ್ತಿರುವ ಈ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಬೈಂದೂರು ಕ್ಷೇತ್ರವೂ ಸೇರ್ಪಡೆಗೊಂಡಿದೆ. ಇಲ್ಲಿ ಬಂಗಾರಪ್ಪನವರ ಪ್ರಭಾವ ಸಾಕಷ್ಟಿದ್ದರು ಕೂಡ, ಈ ಕ್ಷೇತ್ರ ಬಿಜೆಪಿ ಶಾಸಕರನ್ನು ಹೊಂದಿದೆ. ಅಲ್ಲದೇ ಈಡಿಗ ಸಮುದಾಯದ ಬಂಗಾರಪ್ಪಗೆ ಬಿಲ್ಲವ ಮತಗಳು ಸಾಕಷ್ಟು ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
NRB
ಎಂಟು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಶಿವಮೊಗ್ಗ ಆರು ಮಂದಿ ಬಿಜೆಪಿ ಶಾಸಕರನ್ನು, ಇಬ್ಬರು ಕಾಂಗ್ರೆಸ್ ಶಾಸಕರನ್ನು ಹೊಂದಿದೆ. ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಬಂಗಾರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗದಲ್ಲಿ ಭಾಜಪ ಅಭ್ಯರ್ಥಿಯನ್ನಾಗಿ ಪುತ್ರ ರಾಘವೇಂದ್ರ ಅವರನ್ನೇ ಕಣಕ್ಕಿಳಿಸಿದ್ದಾರೆ. ಅನುಭವದ ಕೊರತೆ ಇದ್ದರೂ ಕೂಡ, ಯುವ ನೇತಾರ, ತಂದೆಯ ಕೃಪಾಕಟಾಕ್ಷ, ಕ್ಷೇತ್ರದಲ್ಲಿನ ಬಿಜೆಪಿ ಶಾಸಕರ ಬೆಂಬಲದಿಂದಾಗಿ ಸೋಲಿಲ್ಲದ ಸರದಾರ ಬಂಗಾರಪ್ಪನವರಿಗೆ ಸೋಲುಣಿಸಲು ಹರಸಾಹಸಕ್ಕೆ ಮುಂದಾಗಿದ್ದಾರೆ. 11 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆಂಬ ಹೆಗ್ಗಳಿಕೆ ಬಂಗಾರಪ್ಪನವರದ್ದಾದರೂ ಕೂಡ, ನೀರಾವರಿ, ಬಗರ್ ಹುಕಂ, ವಿದ್ಯುತ್, ರಸ್ತೆ, ಆಸ್ಪತ್ರೆ ಸೇರಿದಂತೆ ಮೂಲಭೂತ ಸೌಕರ್ಯದಿಂದ ಕ್ಷೇತ್ರ ವಂಚಿತವಾಗಿರುವುದು ಅವರಿಗೆ ಮೈನಸ್ ಪಾಯಿಂಟ್ ಆಗಲಿದೆ. ಅಲ್ಲದೇ ಕೋಮುವಾದಿ ಪಕ್ಷವನ್ನು ಸೋಲಿಸಲು ಪಣತೊಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಶಿವಮೊಗ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಅಖಾಡಕ್ಕಿಳಿಸದೆ, ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದಾರೆ. ಏನೇ ಆದರೂ ಇಲ್ಲಿ ನೇರ ಹಣಾಹಣಿ ನಡೆಯುತ್ತಿರುವುದು ಬಂಗಾರಪ್ಪ ಮತ್ತು ರಾಘವೇಂದ್ರ ನಡುವೆ. ಈಡಿಗ ಸಮುದಾಯವೇ ಪ್ರಾಬಲ್ಯ ಹೊಂದಿದ್ದರೂ ಕೂಡ, ಈ ಮೊದಲಿನಂತೆ ಬಂಗಾರಪ್ಪನವರ 'ಕೈ' ಹಿಡಿಯುತ್ತಾರೆಯೇ ಎಂಬುದು ಚಿದಂಬರ ರಹಸ್ಯ. ಅಭಿವೃದ್ಧಿ ಮಂತ್ರಿ, ಈಡಿಗ ಸಮುದಾಯಕ್ಕೆ ಹೆಚ್ಚಿನ ಭರವಸೆ, ಬಂಗಾರಪ್ಪನವರ ನಿರ್ಲಕ್ಷ್ಯ ರಾಜಕಾರಣವನ್ನು ಪ್ರಧಾನ ಅಸ್ತ್ರವನ್ನಾಗಿ ಮಾಡಿಕೊಂಡು ಜನರ ಬಳಿ ಮತಯಾಚಿಸುತ್ತಿರುವ ರಾಘವೇಂದ್ರ ಕ್ಷೇತ್ರದಲ್ಲಿ 'ಕಮಲ'ವನ್ನು ಅರಳಿಸುವ ಮೂಲಕ ವರ್ಣರಂಜಿತ ರಾಜಕಾರಣಿ ಬಂಗಾರಪ್ಪನವರ ರಾಜಕೀಯ ಅಧ್ಯಾಯ ಕೊನೆಗೊಳಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಒಟ್ಟು ಮತದಾರರು -12, 19, 534, ಪುರುಷರು-6,15,192, ಮಹಿಳೆಯರು-6,04, 340
ವಿಧಾನಸಭಾ ಕ್ಷೇತ್ರದ ವಿವರ: ಶಿವಮೊಗ್ಗ ನಗರ-ಕೆ.ಜಿ.ಕುಮಾರಸ್ವಾಮಿ (ಬಿಜೆಪಿ), ಶಿವಮೊಗ್ಗ ಗ್ರಾಮಾಂತರ-ಕೆ.ಎಸ್.ಈಶ್ವರಪ್ಪ (ಬಿಜೆಪಿ), ಭದ್ರಾವತಿ-ಬಿ.ಕೆ.ಸಂಗಮೇಶ್ (ಕಾಂಗ್ರೆಸ್), ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ (ಕಾಂಗ್ರೆಸ್), ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ (ಬಿಜೆಪಿ), ಸೊರಬ-ಎಚ್.ಹಾಲಪ್ಪ (ಬಿಜೆಪಿ), ಸಾಗರ-ಗೋಪಾಲಕೃಷ್ಣ ಬೇಳೂರು (ಬಿಜೆಪಿ), ಬೈಂದೂರು-ಕೆ.ಲಕ್ಷ್ಮೀನಾರಾಯಣ (ಬಿಜೆಪಿ).