ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಪ್ರಧಾನಿ ಹುದ್ದೆ ವಂಶಪಾರಂಪರ್ಯವಲ್ಲ: ಸೋನಿಯಾಗೆ ಸಿಪಿಐ
ಮತಸಮರ
ಪ್ರಧಾನಿಯಾಗ ಬಯಸಿರುವ ಇತರ ಪಕ್ಷದ ನಾಯಕರನ್ನು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯ ವಿರುದ್ಧ ಸೋಮವಾರ ಸಿಪಿಐ ತೀವ್ರ ವಾಗ್ದಾಳಿ ನಡೆಸಿದೆ. ಪ್ರಧಾನಿ ಹುದ್ದೆ ಆಕಾಂಕ್ಷೆ ಒಂದು ಫ್ಯಾಶನ್ ಆಗುತ್ತಿದೆ ಎಂದು ಸೋನಿಯಾ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ನುಡಿದಿದ್ದರು.

"ಸೋನಿಯಾ ಅವರ ಈ ಹೇಳಿಕೆಯು ವಿಲಕ್ಷಣವಾಗಿದೆ. ಆಕೆಯ ಪುತ್ರ ಪ್ರಧಾನಿಯಾಗ ಬಯಸಿದರೆ ಅವರು ಉತ್ಸುಕರಾಗುತ್ತಾರೆ ಮತ್ತು ಇತರರು ಆ ಹುದ್ದೆ ಬಯಸಿದರೆ ಅದೊಂದು ಫ್ಯಾಶನ್ ಆಗುತ್ತದೆ" ಎಂಬುದಾಗಿ ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಟೀಕಿಸಿದ್ದಾರೆ. ಪ್ರಧಾನಿ ಕುರ್ಚಿಯು ವಂಶಪಾರಂಪರ್ಯವಲ್ಲ ಎಂದೂ ಬರ್ಧನ್ ಸೋನಿಯಾರಿಗೆ ನೆನಪಿಸಿದರು.

ಎರಡು ಹಂತಗಳ ಮತದಾನದ ಬಳಿಕ ಕಾಂಗ್ರೆಸ್ ಎಡಪಕ್ಷಗಳಿಗೆ 'ಪ್ರೀತಿಯ ಕರೆ' ನೀಡುತ್ತಿದೆ ಎಂದು ಹೇಳಿದ ಕಮ್ಯೂನಿಸ್ಟ್ ನಾಯಕ, ಕಾಂಗ್ರೆಸ್ ನಮ್ಮನ್ನು ಬೆಂಬಲಿಸಲು ಇಚ್ಚಿಸಿದರೆ, ಅವರೇ ನಿರ್ಧಾರ ಕೈಗೊಳ್ಳಬೇಕಿದೆ ಎಂದು ನುಡಿದರು.

ಮೊದಲ ಎರಡು ಚುನಾವಣೆಗಳಲ್ಲಿ ತೃತೀಯ ರಂಗವು ಮತದಾರರ ಬೆಂಬಲ ಗಳಿಸಿದೆ ಎಂದು ಹೇಳಿದ ಅವರು, ತೃತೀಯ ರಂಗವು ಲೋಕಸಭಾ ಚುನಾವಣೆಗಳು ಹಾಗೂ ಒರಿಸ್ಸಾ ಮತ್ತು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಹೊಂದಲಿದೆ ಎಂದು ನುಡಿದರು.

ತೃತೀಯ ರಂಗವು ಅಧಿಕಾರಕ್ಕೆ ಬಂದರೆ ಭಾರತ-ಅಮೆರಿಕಾ ಅಣುಒಪ್ಪಂದವನ್ನು ಹಿಂತೆಗೆಯಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದೊಂದು ಅಂತಾರಾಷ್ಟ್ರೀಯ ಒಪ್ಪಂದವಾಗಿದ್ದು, ಇಂತಹ ಒಪ್ಪಂದವನ್ನು ಹಿಂತೆಗೆಯುವುದು ಹಲವಾರು ಸಂಕೀರ್ಣ ಪರಿಣಾಮಗಳನ್ನುಂಟುಮಾಡಬಹುದು, ಆದರೆ ನಾವು ಖಂಡಿತವಾಗಿಯೂ ಇದನ್ನು ಮರುಪರಿಶೀಲನೆ ಮಾಡಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.