ತಾನು ಯಾವುದೇ ಧರ್ಮವನ್ನು ವೈರಿಯೆಂದು ಪರಿಗಣಿಸಿಲ್ಲ, ಬದಲಿಗೆ ಭಯೋತ್ಪಾದನೆಯನ್ನು ಬಿತ್ತುವವರು ಮತ್ತು ರಾಷ್ಟ್ರವಿರೋಧಿ ಕಾರ್ಯಗಳಲ್ಲಿ ತೊಡಗಿರುವವರನ್ನು ತಾನು ವಿರೋಧಿಸುತ್ತೇನೆ ಎಂಬುದಾಗಿ ಮುಸ್ಲಿಂ ವಿರೋಧಿ ಬಾಷಣದ ಆರೋಪ ಹೊತ್ತಿರುವ ವರುಣ್ ಗಾಂಧಿ ಹೇಳಿದ್ದಾರೆ. ಅವರು ಚುನಾವಣಾ ಪ್ರಚಾರ ಸಮಾವೇಶ ಒಂದರಲ್ಲಿ ಮಾತನಾಡುತ್ತಿದ್ದರು.
"ನಾನು ಯಾವುದೇ ಧರ್ಮದ ವಿರೋಧಿಯಲ್ಲ. ಅಥವಾ ಯಾವುದೇ ಧರ್ಮವನ್ನು ನನ್ನ ವೈರಿ ಎಂದು ಪರಿಗಣಿಸುವುದಿಲ್ಲ. ನಾನು ಭಯೋತ್ಪಾದನೆಯನ್ನು ಹರಡುವವರ ವಿರೋಧಿ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ವಿರೋಧಿ" ಎಂದು ಅವರು ಹೇಳಿದರು. ತಾನು ಎಲ್ಲಾ ದೇಶಭಕ್ತರನ್ನು ಅವರ ಜಾತಿ ಧರ್ಮಗಳನ್ನು ಪರಿಗಣಿಸದೇ ಗೌರವಿಸುತ್ತೇನೆ ಎಂದು 290ರ ಹರೆಯದ ಬಿಜೆಪಿ ಪೋಸ್ಟರ್ ಬಾಯ್ ವರುಣ್ ನುಡಿದರು.
ಜಾತಿ ಮತ್ತು ಮತದ ರಾಜಕೀಯದಿಂದ ನಾವು ಈಗಾಗಲೇ ಸಾಕಷ್ಟನ್ನು ಅನುಭವಿಸಿದ್ದೇವೆ. ರಾಷ್ಟ್ರೀಯತೆಯ ರಾಜಕೀಯವು ನಮ್ಮ ಸದ್ಯದ ಅವಶ್ಯಕತೆಯಾಗಿದೆ. 21ದಿನಗಳ ಜೈಲುವಾಸವು, ರಾಷ್ಟ್ರದ ಜನತೆಯ ಘತನೆಗಾಗಿ ಹೋರಾಡಬೇಕು ಎಂಬುದನ್ನು ತನಗೆ ಕಲಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಅವರು ಹಿಂದೂ, ಮುಸ್ಲಿಂ, ಸಿಖ್ ಅಥವಾ ಇನ್ಯಾವುದೇ ಧರ್ಮದವರಾಗಿರಲಿ, ಎಲ್ಲ ರಾಷ್ಟ್ರಭಕ್ತರ ಮೇಲೆ ತನಗೆ ಗೌರವವಿದೆ. ಯಾವುದೇ ಧರ್ಮದ ವಿರುದ್ಧ ತನಗೆ ವೈರತ್ವವಿಲ್ಲ ಎಂದು ಅವರು ಪುನರುಚ್ಚರಿಸಿದರು.
ಕೊನೆಯ ಉಸಿರಿರುವ ತನಕ ರಾಷ್ಟ್ರದ ಮತ್ತು ಜತನೆಯ ಘನತೆಯನ್ನು ರಕ್ಷಿಸಬೇಕು ಎಂಬುದನ್ನು ತನಗೆ ಜೈಲುವಾಸ ಕಲಿಸಿಕೊಟ್ಟಿದೆ ಎಂದು ಅವರು ನುಡಿದರು. ಕಾಂಗ್ರೆಸನ್ನು ಟೀಕಿಸಿದ ಅವರು ಅಂತಿಮ ಉಸಿರಾಡುತ್ತಿರುವವರ ಟೀಕೆಗಳನ್ನು ಮಾಡಬಾರದು ಎಂಬುದಾಗಿ ತಾನು ಬಾಲಕನಾಗಿದ್ದಾಗ ತನ್ನಮ್ಮ ಹೇಳಿಕೊಟ್ಟಿದ್ದಾರೆ ಎಂದು ವರುಣ್ ಹೇಳಿದರು.
ಉತ್ತರಪ್ರದೇಶದಲ್ಲಿ ಬಿಜೆಪಿಯು ಯಾಕೆ ಕುಸಿಯುತ್ತಿದೆ ಎಂದರೆ, ಪಕ್ಷದ ಕಾರ್ಯಕರ್ತರಿಗೆ ಸೂಕ್ತವಾದ ಗುರುತಿಸುವಿಕೆ ಲಭಿಸಿಲ್ಲ. ನಾನು ಜೈಲಿನಲ್ಲಿದ್ದಾಗ ಸುಮಾರು 70 ಮಂದಿ ಗಾಯಗೊಂಡರು ಮತ್ತು ಹಲವಾರು ಮಂದಿ ನನ್ನೊಂದಿಗಿದ್ದರು. ಇದು ಯಾಕೆಂದರೆ ನಾನವರ ಎಲ್ಲಾ ಆಗುಹೋಗುಗಳೊಂದಿಗೆ ಅವರೊಂದಿಗೆ ಇದ್ದೆ. ಅವರು ಪಕ್ಷದ ಬೆನ್ನೆಲುಬುಗಳಾಗಿರುವ ಕಾರಣ ತಾನು ಅವರ ಗೌರವಕ್ಕಾಗಿ ಹೋರಾಡಿದ್ದೇನೆ. ಅವರನ್ನು ಸೂಕ್ತವಾಗಿ ರಕ್ಷಿಸದೇ ಇದ್ದರೆ ಇದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ನುಡಿದರು.
"ನನ್ನಲ್ಲಿ ನನ್ನ ತಂದೆಯನ್ನು ಕಾಣುತ್ತಿರುವುದಾಗಿ ಜನರು ಹೇಳುತ್ತಾರೆ. ದುರದೃಷ್ಟವೆಂದರೆ, ನಾನು 100 ದಿನಗಳ ಮಗುವಾಗಿದ್ದಾಗ ನನ್ನ ತಂದೆ ಸಾವನ್ನಪ್ಪಿದ್ದರು. ನುಡಿದಂತೆ ನಡೆಯುವುದು ನಾನು ನನ್ನ ತಂದೆಯಿಂದ ಕಲಿತ ವಿಚಾರವಾಗಿದೆ. ಕನಿಷ್ಟ ಈ ವಿಚಾರದಲ್ಲಾದರೂ ನಾನು ನನ್ನ ತಂದೆಯನ್ನು ಅನುಸರಿಸಲಿದ್ದೇನೆ. ಈಗಲಾಗದಿದ್ದರೂ ಇನ್ನೈದು ವರ್ಷಗಳಲ್ಲಿ ನಾನಿದನ್ನು ಮಾಡಿಯೇ ಸಿದ್ಧ" ಎಂದು ವರುಣ್ ಹೇಳಿದರು.
ಬಹುಜನ ಸಮಾಜವಾದಿ ಪಕ್ಷವು ಕಾನ್ಶಿರಾಮ್ ಸ್ಮಾರಕ ನಿರ್ಮಿಸಲು 18,000 ಕೋಟಿ ರೂಪಾಯಿ ವ್ಯಯಿಸಿರುವುದನ್ನು ಟೀಕಿಸಿದ ಅವರು ಈ ದುಡ್ಡಿನಲ್ಲಿ ಒಂದು ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಬಹುದಾಗಿತ್ತು ಎಂದು ನುಡಿದರು. ಬುಂದೇಲ್‌ಖಂಡ್, ರೋಹಿಲ್‌ಖಂಡ್ ಮತ್ತು ಅವಧ್‌ನ ತನ್ನ ಇತ್ತೀಚಿನ ಪ್ರವಾಸಗಳಲ್ಲಿ ಬಡವರು ಮತ್ತು ಬಲ್ಲಿದರ ನಡುವಿನ ಅಂತರ ಹೆಚ್ಚುತ್ತಿರುವುದನ್ನು ತಾನು ಕಂಡೆ ಎಂದು ಅವರು ಹೇಳಿದರು.