ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಾಗೂ ಅಂತಿಮ ಹಂತದ ಲೋಕಸಭಾ ಚುನಾವಣೆಯ 11 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ 12ಮಂದಿ ವಿವಿಧ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ 16ಮೊಕದ್ದಮೆಗಳಿದ್ದು ಅಗ್ರ ಪಂಕ್ತಿಯಲ್ಲಿದ್ದಾರೆ.
ರಾಷ್ಟ್ರೀಯ ಚುನಾವಣಾ ಕಾವಲು (ನ್ಯಾಷನಲ್ ಎಲೆಕ್ಷನ್ ವಾಚ್) ಸಂಸ್ಥೆಯ ರಾಜ್ಯ ಸಮಿತಿಯ ಸಂಚಾಲಕ ಪ್ರೊ.ತ್ರಿಲೋಚನ ಶಾಸ್ತ್ರಿ ಬಿಡುಗಡೆ ಮಾಡಿರುವ ವಿವರದಂತೆ, 110 ಅಭ್ಯರ್ಥಿಗಳ ಪ್ರಮಾಣ ಪತ್ರವನ್ನು ಅಧ್ಯಯನ ನಡೆಸಿರುವ ಸಂಸ್ಥೆ ಈ ಮಾಹಿತಿ ಕಲೆ ಹಾಕಿದೆ.
ವಿವಿಧ ಮೊಕದ್ದಮೆ ಎದುರಿಸುತ್ತಿರುವ ತಲಾ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ಈ ಬಾರಿ ಅಗ್ರ ಸ್ಥಾನದಲ್ಲಿದೆ. ಬಿಜೆಪಿ ವಿರುದ್ಧ 12, ಕನ್ನಡ ಚಳವಳಿ ವಾಟಾಳ್ ಪಕ್ಷ-11, ಜೆಡಿಎಸ್-10, ಕಾಂಗ್ರೆಸ್-10, ಬಿಎಸ್ಪಿ-06, ಪಕ್ಷೇತರ-06, ಸಿಪಿಐ (ಎಂಎಲ್)-01 ಸೇರಿದಂತೆ ಒಟ್ಟು 56 ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಜೆಡಿಎಸ್‌ನ 2, ಬಿಎಸ್ಪಿಯ ಒಬ್ಬರು ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿರುವ ಮೂವರು ಈ ಪಟ್ಟಿಯಲ್ಲಿದ್ದಾರೆ. ಪ್ರಥಮ ಹಂತದ ಚುನಾವಣೆಯಲ್ಲಿ ಶೇಕಡ 14.9ರಷ್ಟು ಅಭ್ಯರ್ಥಿಗಳ ವಿರುದ್ಧ ಮೊಕದ್ದಮೆಗಳಿದ್ದವು. ಎರಡನೇ ಹಂತದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಈ ಪ್ರಮಾಣ ಶೇ.11ರಷ್ಟಿದೆ.
NRB
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತೀವ್ರ ಸ್ವರೂಪದ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. 2009ರ ಮಾರ್ಚ್ 4ರಂದು ಐಪಿಸಿ ಕಲಂ153ಎ ಅಡಿಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಮೈಸೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ರಫೀಕ್ ವಿರುದ್ಧ ಐಪಿಸಿ 292ನೇ ಕಲಂನಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ. ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿಗಳಾದ ಜನಾರ್ದನ ಪೂಜಾರಿ (ದಕ್ಷಿಣಕನ್ನಡ) ವಿರುದ್ಧ 2, ಮಂಜುನಾಥ ಕುನ್ನೂರು (ಧಾರವಾಡ) ಮತ್ತು ಎಸ್.ಎಸ್.ಮಲ್ಲಿಕಾರ್ಜುನ (ದಾವಣಗೆರೆ) ತಲಾ ಒಂದು, ಬಿಜೆಪಿಯ ಎ.ಆರ್.ಕೃಷ್ಣಮೂರ್ತಿ (ಚಾ.ನಗರ)-2, ಎಲ್.ಆರ್.ಶಿವರಾಮೇಗೌಡ (ಮಂಡ್ಯ) 1 ಮೊಕದ್ದಮೆ ಎದುರಿಸುತ್ತಿದ್ದಾರೆ.
ದಾವಣಗೆರೆ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಡಾ.ಹಿದಾಯತ್ ಉರ್ ರೆಹಮಾನ್ ಖಾನ್, ಬಾಗಲಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗಡದಣ್ಣವರ್ ರಾಮಣ್ಣ ಭೀಮಪ್ಪ ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಎಂ.ಶಿವಣ್ಣ ವಿರುದ್ಧ ಒಂದು ಮೊಕದ್ದಮೆಗಳನ್ನು ಆರೋಪಿತರು.
NRB
11ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ 42ಮಂದಿ ಪದವಿ ರಹಿತರು, 40ಅಭ್ಯರ್ಥಿಗಳು ಪದವಿ, 6ಮಂದಿ ವೃತ್ತಿ ಶಿಕ್ಷಣ ಪದವಿ, 13ಸ್ನಾತಕೋತ್ತರ ಪದವೀಧರರು ಮತ್ತು ಒಬ್ಬ ಡಾಕ್ಟರೇಟ್ ಪದವೀಧರ ಕಣದಲ್ಲಿದ್ದಾರೆ. ಎಂಟು ಮಂದಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಶೈಕ್ಷಣಿಕ ವಿವರವನ್ನೇ ನಮೂದಿಸಿಲ್ಲ.
110 ಮಂದಿ ಅಭ್ಯರ್ಥಿಗಳ ಪೈಕಿ 25-30ವರ್ಷದ 10 ಮಂದಿ, 31-40 ವರ್ಷದ-32 ಮಂದಿ, 41-50ವರ್ಷ-29ಮಂದಿ, 51-60ವರ್ಷದ 27ಮಂದಿ, 61-70ವರ್ಷದ 4, 71-80ವರ್ಷದ 8ಮಂದಿ ಸ್ಪರ್ಧಾಕಣದಲ್ಲಿದ್ದಾರೆ.(ಇದರಲ್ಲಿ 107ಮಂದಿ ಪುರುಷರು, ಮಂದಿ ಮಹಿಳೆಯರು ಸೇರಿದ್ದಾರೆ.)
ನೀತಿ ಸಂಹಿತೆ ಉಲ್ಲಂಘನೆ: ರಾಜ್ಯದಲ್ಲಿ ಒಟ್ಟು 1893 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ನಡೆದಿದ್ದು, 301 ಪ್ರಕರಣ ದಾಖಲಾಗಿರುವ ಬಳ್ಳಾರಿ ಪ್ರಥಮ ಸ್ಥಾನದಲ್ಲಿದ್ದು, ದ್ವಿತೀಯ ಸ್ಥಾನದಲ್ಲಿ ಗುಲ್ಬರ್ಗಾ ಕ್ಷೇತ್ರದಲ್ಲಿ 263 ಪ್ರಕರಣ ದಾಖಲಾಗಿದೆ. ಇನ್ನುಳಿದಂತೆ ಬೆಳಗಾವಿ-156, ಮಂಡ್ಯ-152, ಶಿವಮೊಗ್ಗ-149, ಚಾಮರಾಜನಗರ-137, ರಾಯಚೂರು-116. ಪಕ್ಷವಾರು ವಿವರ: ಬಿಜೆಪಿ ವಿರುದ್ಧ 178, ಕಾಂಗ್ರೆಸ್-173, ಜೆಡಿಎಸ್-89, ಬಿಎಸ್ಪಿ-14, ಸಿಪಿಎಂ-04 ಸೇರಿದಂತೆ ಒಟ್ಟು 189 ಪ್ರಕರಣ ದಾಖಲಾಗಿದೆ.