ಪ್ರಥಮ ಹಂತದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬಳ್ಳಾರಿಯಲ್ಲಿ ಅಕ್ರಮ ಹಾಗೂ ನೀರಸ ಮತದಾನವಾಗಿರುವ ಹಿನ್ನಲೆಯಲ್ಲಿ ಈ ಕ್ಷೇತ್ರಗಳ ಚುನಾವಣೆ ರದ್ದುಗೊಳಿಸಿ ಮರು ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ.
ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತ ಎಸ್.ವೈ.ಖುರೇಷಿ ಅವರನ್ನು ಭೇಟಿ ಮಾಡಿದ ಬಳಿಕ ಕಾಂಗ್ರೆಸ್ ನಿಯೋಗದ ಪರ ಮಾತನಾಡಿದ ವಕ್ತಾರ ವಿ.ಎಸ್.ಉಗ್ರಪ್ಪ, ಬಳ್ಳಾರಿಯಲ್ಲಿ ವ್ಯಾಪಕ ಚುನಾವಣಾ ಅಕ್ರಮಗಳು ನಡೆದಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 30 ಸಾವಿರ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ. ಈ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಮತದಾರರ ಹಕ್ಕು ಕಸಿಯಲು ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ ಇದ್ದವರಿಗೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಮತದಾನ ಮಾಡುವ ಹಕ್ಕು ನೀಡಬೇಕು. ಚುನಾವಣಾ ಅಕ್ರಮ ಮಾಡುವವರ ಬಗ್ಗೆ ಚುನಾವಣಾ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಜೆಡಿಎಸ್ ಕೂಡ ಮರು ಮತದಾನಕ್ಕೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಎರಡನೆ ಹಂತದ ಚುನಾವಣೆಯಲ್ಲಿ ಇಂತಹ ಲೋಪ ದೋಷಗಳು ನಡೆಯಲು ಅವಕಾಶ ನೀಡಬಾರದು ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ಆಗ್ರಹಿಸಿದ್ದಾರೆ.