ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾದ ಮಾಜಿ ಪ್ರಧಾನಿ ಹೊಳೆನರಸಿಪುರ ದೊಡ್ಡೇಗೌಡ ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಿಂದ ತಮ್ಮ ಕೊನೆಯ ಹೋರಾಟ ಎಂಬಂತೆ ಹಣಾಹಣಿಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಬಿ.ಶಿವರಾಂ ಹಾಗೂ ಬಿಜೆಪಿಯಿಂದ ಕೆ.ಎಚ್.ಹನುಮೇಗೌಡ ಅಖಾಡದಲ್ಲಿದ್ದಾರೆ. 'ರಾಜಕೀಯದ ಚಾಣಕ್ಯ' ಎಂದೇ ಬಿಂಬಿತವಾಗಿರುವ ದೇವೇಗೌಡರು ಸುದೀರ್ಘ ರಾಜಕೀಯ ಜೀವನದ ಅಸ್ತ್ರವನ್ನು ಬಳಸುವ ಮೂಲಕ ಜೆಡಿಎಸ್‌ಗೊಂದು ಭದ್ರ ನೆಲೆ ಕಲ್ಪಿಸುವ ಸಂಕಲ್ಪ ತೊಟ್ಟಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದು, ಮೂರು ಕ್ಷೇತ್ರ ಕಾಂಗ್ರೆಸ್ ವಶದಲ್ಲಿದೆ. ಬಿಜೆಪಿ ಮಾತ್ರ ಇದ್ಯಾವುದರ ಬಲ ಇಲ್ಲದೆಯೇ ತನ್ನ ನೆಲೆ ಸ್ಥಾಪಿಸಲು ಹೊರಟಿದೆ.
ಹಾಸನ, ಹೊಳೆನರಸಿಪುರ, ಅರಸಿಕೆರೆ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ, ಮಾರುಕಟ್ಟೆ ಇಲ್ಲದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಇಷ್ಟು ವರ್ಷ ದೇವೇಗೌಡರನ್ನು ಆಯ್ಕೆ ಮಾಡಿದ್ದೇವೆ, ಗೌಡರ ಮೇಲಿನ ಅಭಿಮಾನದಿಂದ ಜೆಡಿಎಸ್ ಕೈ ಹಿಡಿದಿದ್ದರು ಕೂಡ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎಂಬ ದೂರು ಮತದಾರರದ್ದು. ಕ್ಷೇತ್ರದ ಜನ ಬದಲಾವಣೆಯತ್ತ ವಾಲಿದಲ್ಲಿ ಬಿಜೆಪಿಗೊಂದು ಅವಕಾಶ ದೊರೆಯಬಹುದು ಎಂಬ ನಿರೀಕ್ಷೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಏನೇ ಆದರು ಮಾಜಿ ಪ್ರಧಾನಿ ಕ್ಷೇತ್ರ, ಜಾತಿ ಬಲ ಹೊಂದಿರುವ ದೇವೇಗೌಡರು ಇದು ತಮ್ಮ ಅಂತಿಮ ಹೋರಾಟ ಎಂದೇ ಮತಯಾಚಿಸುತ್ತಿದ್ದಾರೆ. ಅದಲ್ಲದೇ ಐದು ಜೆಡಿಎಸ್ ಶಾಸಕರಿದ್ದಾರೆ. ಅವೆಲ್ಲವೂ ಗೌಡರಿಗೆ ಅನುಕೂಲ ಕಲ್ಪಿಸಲಿದೆ.
1989 ಹಾಗೂ 1999ರ ಸಂಸತ್ ಚುನಾವಣೆಯಲ್ಲಿ ದೇವೇಗೌಡರು ಸೋಲನ್ನನುಭವಿಸಿದ್ದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ, ಲಿಂಗಾಯಿತ, ಕುರುಬ ಹಾಗೂ ಮುಸ್ಲಿಂ ಮತದಾರರು ಪ್ರಮುಖರಾಗಿದ್ದಾರೆ. ಜೆಡಿಎಸ್ ಮತಬ್ಯಾಂಕ್ ಒಡೆಯುವಲ್ಲಿ ಬಿಜೆಪಿಯ ಕೆ.ಎಚ್.ಹನುಮೇಗೌಡ, ಕಾಂಗ್ರೆಸ್‌ನ ಬಿ.ಶಿವರಾಂ ಲಗ್ಗೆ ಇಡುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಏನೇ ಆಗಲಿ ಜೆಡಿಎಸ್ ಭದ್ರಕೋಟೆಯನ್ನು ಒಡೆಯಬೇಕೆಂಬ ಛಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧೆಗಿಳಿದಿವೆ.
ಸಿವಿಲ್ ಇಂಜಿನಿಯರ್ ಡಿಪ್ಲೋಮಾ ಪದವಿ ಹೊಂದಿರುವ ಗೌಡರು, 1953ರಲ್ಲಿ ಪ್ರಥಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 1962ರಲ್ಲಿ ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದರು. ಬಳಿಕ 1967-71, 1972-77, 1978-83ರಲ್ಲಿಯೂ ವಿಜಯಿಶಾಲಿಯಾಗಿದ್ದರು. 1970 ರಲ್ಲಿ ಜನತಾಪಕ್ಷ ಕಟ್ಟುವ ಮೂಲಕ ರಾಜ್ಯದಲ್ಲಿ ಪರ್ಯಾಯ ಶಕ್ತಿಯೊಂದನ್ನು ಹುಟ್ಟು ಹಾಕಿದ್ದರು. ತನನಂತರ 1980ರಲ್ಲಿ ಜನತಾಪಕ್ಷ ಇಬ್ಭಾಗವಾಗಿ, ಜನತಾದಳ ಜನ್ಮತಳೆಯುವ ಮೂಲಕ ದಳದ ಚುಕ್ಕಾಣಿ ಹಿಡಿದವರು ಗೌಡರು. 1996ರಲ್ಲಿ ಕಾಂಗ್ರೆಸ್ ಸೋತು, ಪ್ರಧಾನಿ ಪಿ.ವಿ.ನರಸಿಂಹರಾವ್ ರಾಜೀನಾಮೆ ನೀಡಿದ ಸಂದರ್ಭದಲ್ಲಿ, ಆಕಸ್ಮಿಕವಾಗಿ ಪ್ರಧಾನಿ ಹುದ್ದೆ ಒಲಿದದ್ದು ಎಚ್.ಡಿ.ದೇವೇಗೌಡರಿಗೆ. 1994 ರಿಂದ 96ರವರೆಗೆ ರಾಜ್ಯದ ಮುಖ್ಯಮಂತ್ರಿ ಗಾದಿ ಅಲಂಕರಿಸಿದ್ದ ಗೌಡರು, 1996ರಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಪ್ರಧಾನಿ ಪಟ್ಟ ಅಲಂಕರಿಸಿದ್ದರು. ಹೀಗೆ ರಾಜಕೀಯದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಮುತ್ಸದ್ಧಿ ರಾಜಕಾರಣಿ ಗೌಡರು ಈ ಬಾರಿ ಜಿದ್ದಾಜಿದ್ದಿನ ಹೋರಾಟವನ್ನು ಎದುರಿಸಬೇಕಾಗಿದೆ. ಕಾಂಗ್ರೆಸ್, ಬಿಜೆಪಿ ರಣತಂತ್ರದ ರಾಜಕೀಯ ಕದನದಲ್ಲಿ ಚಾಣಕ್ಯ ರಾಜಕಾರಣಿ ದೇವೇಗೌಡರು ಆಯ್ಕೆಯಾಗುತ್ತಾರೋ ಇಲ್ಲ ಸೋಲಿನೊಂದಿಗೆ 'ರಾಜಕೀಯ ಸನ್ಯಾಸ' ಸ್ವೀಕರಿಸಲಿದ್ದಾರೆಯೇ ಎಂಬುದನ್ನು ಮತದಾರ ಪ್ರಭು ನಿರ್ಧರಿಸಲಿದ್ದಾನೆ.
ಒಟ್ಟು ಮತದಾರರು: 14,16,077, ಪುರುಷರು-7,16,539, ಮಹಿಳೆಯರು-6,77,538