ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದ ಮೇಲೆ ಚಿಕ್ಕಮಗಳೂರು ಶಾಸಕ, ರಾಜ್ಯ ಬಿಜೆಪಿ ವಕ್ತಾರ ಸಿ.ಟಿ.ರವಿಗೆ ಚುನಾವಣಾ ಆಯೋಗ ಬುಧವಾರ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ಸಂಜೆಯೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಭಾರತೀಯ ದಂಡ ಸಂಹಿತೆ 153ಎ, 153 ಬಿ ಹಾಗೂ 505ರ ಕಲಂ ಅನ್ವಯ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.
ಹಾಸನ ಜಿಲ್ಲೆಯ ಸಕಲೇಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏಪ್ರಿಲ್ 6ರಂದು ಬಿಜೆಪಿ ಪರ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ, ಸಿ.ಟಿ.ರವಿ, ಹಿಂದುತ್ವ ಎನ್ನುವವರ ಕೈ ಕಡಿಯಬೇಕು ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ, ಹಿಂದುತ್ವ ಎನ್ನುವವರ ಕೈ ಕಡಿಯುವ ಮೊದಲು ನಿಮ್ಮ ತಿಥಿ ಮಾಡುತ್ತಾರೆ ಎಂದು ಪ್ರಚೋದನಾಕಾರಿಯಾಗಿ ಮಾತನಾಡಿದ್ದರು.
ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.