ಯಾವುದೇ ಮುನ್ಸೂಚನೆ ನೀಡಿದೆ ಅನಧಿಕೃತವಾಗಿ ಇಲ್ಲಿನ ರಿಸಾರ್ಟ್‌ವೊಂದರಲ್ಲಿ ಠಿಕಾಣಿ ಹೂಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಚುನಾವಣೆ ಆಯೋಗ ಪ್ರಕರಣ ದಾಖಲಿಸಿದೆ.
ರಾಜ್ಯದಲ್ಲಿ ಏಪ್ರಿಲ್ 30ಕ್ಕೆ 11ಲೋಕಸಭಾ ಕ್ಷೇತ್ರಗಳಿಗೆ ಅಂತಿಮ ಮತದಾನ ನಡೆಯುವ ಹಿನ್ನೆಲೆಯಲ್ಲಿ, ಮಂಗಳವಾರ ಸಂಜೆ 5ಗಂಟೆಗೆ ರಾಜಕೀಯ ಮುಖಂಡರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿತ್ತು. ಅಲ್ಲದೇ ಕ್ಷೇತ್ರದಿಂದ ಅಭ್ಯರ್ಥಿಗಳು ಸೇರಿದಂತೆ, ರಾಜಕೀಯ ಮುಖಂಡರು ಕ್ಷೇತ್ರ ಬಿಟ್ಟು ತೆರಳುವಂತೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಬಹಿರಂಗ ಪ್ರಚಾರ ಸೇರಿದಂತೆ ಹೊರಗಡೆಯಿಂದ ಆಗಮಿಸಿರುವ ಮುಖಂಡರು ಬೇರೆ ಸ್ಥಳಗಳಿಂದ ಜಾಗ ಖಾಲಿ ಮಾಡಬೇಕು. ಆದರೆ, ಡಿಕೆ ಶಿವಕುಮಾರ್ ಅವರು ಮಡಿಕೇರಿಯ ಕುಶಾಲನಗರದಲ್ಲಿರುವ ಕೋದಂಡರಾಮಯ್ಯ ಅವರ ರಿಸಾರ್ಟ್‌ನಲ್ಲಿ ಉಳಿದುಕೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಮಹದೇವಪೇಟೆಯಲ್ಲಿ ಇಬ್ಬರು ಸ್ಥಳೀಯ ನಾಯಕರು ಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.