ರಾಜ್ಯದ 2ನೇ ಹಾಗೂ ಅಂತಿಮಹಂತದ 11 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ನಟ, ಸಂಸದ ಎಂ.ಎಚ್.ಅಂಬರೀಷ್, ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ, ಮಾಜಿ ಸಚಿವ ಜನಾರ್ದನ ಪೂಜಾರಿ, ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ 156ಮಂದಿ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.
ಎರಡನೇ ಹಂತದಲ್ಲಿ 76, 79, 699 ಮಹಿಳೆಯರು ಸೇರಿದಂತೆ 1.55ಕೋಟಿ ಮತದಾರರಿದ್ದಾರೆ ಎಂದು ವಿವರ ನೀಡಿರುವ ರಾಜ್ಯ ಚುನಾವಣಾ ಆಯೋಗ, 11ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಿಬ್ಬಂದಿ, ವಿದ್ಯುನ್ಮಾನ ಮತಯಂತ್ರಗಳು ಕ್ಷೇತ್ರಗಳಿಗೆ ರವಾನಿಸಲಾಗಿದೆ ಎಂದರು.
NRB
18,452 ಮತಗಟ್ಟೆಗಳಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಅಂಗವಾಗಿ 11ಕ್ಷೇತ್ರಗಳಲ್ಲಿ ಬಿಗಿ ಪೊಲೀಸ್ ಪಹರೆ ನಡೆಸಲಾಗಿದೆ. ಅಲ್ಲದೇ ಮತಯಂತ್ರಗಳಿಗೆ ಅಭ್ಯರ್ಥಿಗಳು ಪೂಜೆ ಸಲ್ಲಿಸದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಎರಡನೇ ಹಾಗೂ ಅಂತಿಮ ಹಂತದಲ್ಲಿ ಶಿವಮೊಗ್ಗ, ಚಾಮರಾಜನಗರ, ಹಾವೇರಿ, ಬಾಗಲಕೋಟೆ, ಮೈಸೂರು, ಮಂಡ್ಯ, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
NRB
ಹಾಸನದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶಿವಮೊಗ್ಗ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಂಡ್ಯದಿಂದ ಅಂಬರೀಷ್, ಉಡುಪಿಯಿಂದ ಸದಾನಂದ ಗೌಡ, ದಕ್ಷಿಣ ಕನ್ನಡದಿಂದ ಜನಾರ್ದನ ಪೂಜಾರಿ, ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಕಣದಲ್ಲಿರುವ ಘಟಾನುಘಟಿಗಳಾಗಿದ್ದಾರೆ.
ಬಂದೋಬಸ್ತ್‌ಗಾಗಿ ಹೋಮ್ ಗಾರ್ಡ್ಸ್ ಸೇರಿದಂತೆ 55ಸಾವಿರ ಪೊಲೀಸ್, 89ಸಿಆರ್‌ಪಿಎಫ್ ತುಕಡಿ, 12ಸಿಐಎಸ್‌ಎಫ್ ತುಕಡಿ, 35 ಕಂಪೆನಿ ವಿಶೇಷ ಶಸ್ತ್ರ ಮೀಸಲು ಪಡೆ, 29 ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ), ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ 107, ಪೊಲೀಸ್ ಇನ್ಸ್‌ಪೆಕ್ಟರ್ 234, ಸಬ್ ಇನ್ಸ್‌ಪೆಕ್ಟರ್-1,637 ಹಾಗೂ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.