ಚುನಾವಣೆಗೆ 'ದಿಢೀರ್ ವಿಷಯ': ಲೆಕ್ಕಾಚಾರ ಬದಲಿಸಬಲ್ಲವೇ? ನವದೆಹಲಿ, ಬುಧವಾರ, 29 ಏಪ್ರಿಲ್ 2009( 20:15 IST ) | |
ಕಳೆದ ಗುಜರಾತ್ ಅಸೆಂಬ್ಲಿ ಚುನಾವಣೆಗಳಲ್ಲಿ ನರೇಂದ್ರ ಮೋದಿಯವರ ಮೇಲೆ "ಸಾವಿನ ಸರದಾರ" (ಮೌತ್ ಕಾ ಸೌದಾಗರ್) ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಲಾಭವನ್ನೂ ತಂದುಕೊಟ್ಟಿರಲಿಲ್ಲ. ಆದರೆ ಗೋಧ್ರೋತ್ತರ ಹಿಂಸಾಕಾಂಡದಲ್ಲಿ ನರೇಂದ್ರ ಮೋದಿ ಕೈವಾಡದ ಬಗ್ಗೆ ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿರುವುದು ಗುಜರಾತಿನ ಮಟ್ಟಿಗೆ ಬಿಜೆಪಿಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರಲಿದೆಯೇ?
ಗುರುವಾರ ನಡೆಯುವ ಮತದಾನದಲ್ಲಿ, ಗುಜರಾತಿನಿಂದ 15ನೇ ಲೋಕಸಭೆ ಪ್ರವೇಶಿಸಲು ಬಿಜೆಪಿಯ 26 ಮಂದಿ ಅಭ್ಯರ್ಥಿಗಳಿಗೆ ಈ ತೀರ್ಪು ತಡೆಯಾಗಲಿದೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಈ ತೀರ್ಪು ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸುವ ಮುನ್ನವೇ, 64 ಕೋಟಿ ರೂ.ಗಳ ಬೋಫೋರ್ಸ್ ಹಗರಣದಲ್ಲಿ ಸಿಬಿಐಯು ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿಯ ವಿರುದ್ಧದ ರೆಡ್ ಕಾರ್ನರ್ ನೋಟೀಸ್ ಹಿಂತೆಗೆದುಕೊಂಡದ್ದು ಚುನಾವಣೆಗೆ ಮತ್ತಷ್ಟು ಕಾವು ತಂದುಕೊಟ್ಟಿದೆ. ಇದು ದಿಢೀರ್ ಚುನಾವಣಾ ವಿಷಯವಾಗಿಬಿಟ್ಟಿದೆ.
ಇದಕ್ಕೆ ಮುನ್ನ, ಶ್ರೀಲಂಕಾದಲ್ಲಿ ಎಲ್ಟಿಟಿಇ ಮೇಲೆ ಶ್ರೀಲಂಕಾ ಸೇನೆಯ ದಂಡಯಾತ್ರೆ ಮತ್ತು ಅಲ್ಲಿ ತಮಿಳರ ಯಾತನಾಮಯ ಪರಿಸ್ಥಿತಿಯು ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮಿತ್ರಕೂಟದ ಚುನಾವಣಾ ಭವಿಷ್ಯದ ಮೇಲೆ ಕರಾಳ ನೆರಳು ಬೀರುತ್ತಿತ್ತು. ಆದರೆ, ತಕ್ಷಣವೇ ಕಾರ್ಯಪ್ರವೃತ್ತವಾದ ಕೇಂದ್ರದ ಯುಪಿಎ ಸರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ಅವರನ್ನು ದ್ವೀಪರಾಷ್ಟ್ರಕ್ಕೆ ಅಟ್ಟಿ, ಸಂಭಾವ್ಯ ಚುನಾವಣಾ ಹಾನಿ ಸರಿಪಡಿಸುವ ಪ್ರಯತ್ನ ನಡೆಸಿತು.
ಅವರು ಮರಳಿ ಬಂದ ತಕ್ಷಣವೇ, ತಮಿಳು ನಾಗರಿಕರ ರಕ್ಷಣೆಗೆ ಅನುವಾಗುವಂತೆ ತೀಕ್ಷ್ಣ ಕಾರ್ಯಾಚರಣೆಗಳನ್ನು ನಡೆಸುವುದಿಲ್ಲ ಎಂದು ಶ್ರೀಲಂಕಾದ ರಾಜಪಕ್ಷೆ ಸರಕಾರ ಭರವಸೆ ನೀಡಿತು. ಉಪವಾಸ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ, ಡಿಎಂಕೆಯ ಚುನಾವಣಾ ಭವಿಷ್ಯಕ್ಕೆ ದಯನೀಯ ಏಟು ಬೀಳದಂತೆ, ಆ ಮೂಲಕ ಓಟು ದೊರಕಿಸುವ ಪ್ರಯತ್ನ ನಡೆಸಿದಂತೆ ಕಂಡುಬಂತು. ಕರುಣಾನಿಧಿ ನಿಲುವಿಗೆ ಪ್ರಧಾನ ಕಾರಣವೆಂದರೆ, ಅವರ ಬದ್ಧ ರಾಜಕೀಯ ವಿರೋಧಿ ಜೆ.ಜಯಲಲಿತಾ ಅವರು, ಪ್ರತ್ಯೇಕ ತಮಿಳು ರಾಷ್ಟ್ರ (ಈಳಂ)ಕ್ಕಾಗಿ ಬೇಡಿಕೆ ಮುಂದಿರಿಸಿ ಅಚ್ಚರಿ ಹುಟ್ಟಿಸಿದ್ದು. ಇದು ಮತಗಳನ್ನು ಎಐಎಡಿಎಂಕೆಯತ್ತ ತಿರುಗಿಸುತ್ತದೆ ಎಂಬುದು ಅರಿವಾದದ್ದೇ ತಡ, ಕರುಣಾನಿಧಿ ಉಪವಾಸ ನಡೆಸಿದರು ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ.
ಇದಕ್ಕೂ ಮೊದಲು, 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಜಗದೀಶ್ ಟೈಟ್ಲರ್‌ಗೆ ಕ್ಲೀನ್ ಚಿಟ್ ನೀಡಿದ ಸಿಬಿಐ ಕ್ರಮವನ್ನು ವಿರೋಧಿಸಿ, ಗೃಹ ಸಚಿವ ಚಿದಂಬರಂ ಅವರತ್ತ ಪತ್ರಕರ್ತ ಶೂ ಎಸೆದಿದ್ದ. ಶೂ ತನ್ನ ಗುರಿ ತಪ್ಪಿತಾದರೂ, ಅದರ ಉದ್ದೇಶದ ಗುರಿ ಈಡೇರಿತು. ಟೈಟ್ಲರನ್ನು ಕಾಂಗ್ರೆಸ್ ಪಕ್ಷವು ದೆಹಲಿಯ ಅಭ್ಯರ್ಥಿತನದಿಂದ ಹೊರಗೆಳೆದುಕೊಂಡಿತು.
ನಡೆಯುತ್ತಲೇ ಇದ್ದ ತಮಿಳರ ಪರಿಸ್ಥಿತಿಯ ಸಂಗತಿ ಹೊರತುಪಡಿಸಿದರೆ, ಉಳಿದವೆಲ್ಲ ದಿಢೀರ್ ಚುನಾವಣಾ ವಿಷಯಗಳು. ಇವುಗಳು ಈಗಾಗಲೇ ಚುನಾವಣಾ ಫಲಿತಾಂಶದ ಬಗ್ಗೆ ಗೊಂದಲದಲ್ಲಿರುವ ಮತ್ತು ಚುನಾವಣೋತ್ತರ ಕಾಲದಲ್ಲಿ ಏನೂ ಆಗಬಹುದಾದ ಬಗ್ಗೆ ಲೆಕ್ಕಾಚಾರ ಹಾಕುತ್ತಿರುವ ಚುನಾವಣಾ ಪಂಡಿತರ ಲೆಕ್ಕಾಚಾರಕ್ಕೆ ಮತ್ತಷ್ಟು ಗೊಂದಲದ ಗರಿಗಳನ್ನು ಮೂಡಿಸಿವೆ ಎಂಬುದಂತೂ ನಿಜ.
ರಾಷ್ಟ್ರ ರಾಜಕೀಯ ರಂಗದಲ್ಲಿ ಬದಲಾವಣೆಗಳನ್ನೇ ಮಾಡಬಲ್ಲ ಸಾಮರ್ಥ್ಯವಿರುವ ತಮಿಳುನಾಡಿನ ಚುನಾವಣಾ ಕಣದಲ್ಲಿ, ಶ್ರೀಲಂಕಾ ತಮಿಳರ ವಿಷಯವು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಚುನಾವಣಾ ತಜ್ಞರನ್ನು ಕಾಡುತ್ತಲೇ ಇರುವ ವಿಷಯ.
ಅಂತೆಯೇ, ಮೋದಿ ಮೇಲೆ ತನಿಖೆ, ಕ್ವಟ್ರೋಚಿಯನ್ನು ರಕ್ಷಿಸುವ ಸಂಗತಿಗಳು ಕಾಂಗ್ರೆಸ್-ಬಿಜೆಪಿಯ ಚುನಾವಣಾ ಪರಿಣಾಮಗಳ ಮೇಲೆ ಪ್ರಭಾವ ಬೀರುತ್ತದೆಯೇ ಎಂದು ತಿಳಿಯಬೇಕಿದ್ದರೆ ಮೇ 16ರವರೆಗೆ ಕಾಯಬೇಕಷ್ಟೆ.