ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡಿ ಆಯುಷ್ (ಆಯುರ್ವೇದ ಮತ್ತು ಯುನಾನಿ ನಿರ್ದೇಶನಾಲಯ) ಸಂಸ್ಥೆ ಪತ್ರ ಹೊರಡಿಸಿರುವ ಆಘಾತಕಾರಿ ಅಂಶವನ್ನು ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಗುರುವಾರ ಬಹಿರಂಗಪಡಿಸಿದ್ದು, ಕಾನೂನು ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿಯನ್ನೇ ಬೆಂಬಲಿಸುವಂತೆ ಸಿಬ್ಬಂದಿಗಳಿಗೆ ಆದೇಶ ನೀಡುವ ಪತ್ರವನ್ನು ಹೊರಡಿಸಿರುವ ಆಯುಷ್ ನಿರ್ದೇಶಕ ಪ್ರಕಾಶ್ ಅವರನ್ನು ತಕ್ಷಣವೇ ವಜಾಗೊಳಿಸಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯುಷ್ ಸಂಸ್ಥೆಯಿಂದ ಹೊರಡಿಸಿರುವ ಆದೇಶ ಪತ್ರದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದರು.
ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳ ಕಚೇರಿಯ ಮುಖ್ಯಾಧಿಕಾರಿ ನಂದಕುಮಾರ್ ಅವರು ಅಧಿಕೃತವಾಗಿ ಸರ್ಕಾರಿ ವಾಹನದಲ್ಲಿ ಚಿಕ್ಕಮಗಳೂರಿಗೆ ತೆರಳಿ ಬಿಜೆಪಿ ಪರ ಮತಯಾಚಿಸಿರುವುದಾಗಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇದೀಗ ಆಯುಷ್ ಸಂಸ್ಥೆ ಅಧಿಕೃತವಾಗಿ ಪತ್ರ ಹೊರಡಿಸಿ, ಆಡಳಿತ ಯಂತ್ರದ ದುರುಪಯೋಗ ಮಾಡಿಕೊಳ್ಳಲು ಹೊರಟಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
'ಅಧೀನ ಸರ್ಕಾರಿ ನೌಕರರ ಸಭೆ ಕರೆದು, ಚುನಾವಣೆಯಲ್ಲಿ ಕುಟುಂಬದ ಸದಸ್ಯರು ಕಡ್ಡಾಯವಾಗಿ ಬಿಜೆಪಿಗೆ ಮತನೀಡುವಂತೆ ಸೂಚನೆ ನೀಡಲು ಉನ್ನತ ಅಧಿಕಾರಿಗಳು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದ್ದು, ಈ ಪತ್ರವನ್ನು ರಹಸ್ಯವಾಗಿಡಲು ಸೂಚನೆ ನೀಡಲಾಗಿದೆ. ಅಲ್ಲದೇ ಮುಂದಿನ ಎಂಎಂಆರ್ ಸಭೆಯಲ್ಲಿ ಪತ್ರವನ್ನು ವಾಪಸು ನೀಡಲು ಕೂಡ ಹೇಳಿದ್ದು, ಇದನ್ನು ತುಂಬಾ ರಹಸ್ಯವಾಗಿಡಬೇಕು' ಎಂಬ ಒಕ್ಕಣೆ ಪತ್ರದಲ್ಲಿ ನಮೂದಿಸಲಾಗಿದೆ.