ಗಾಂಧಿನಗರ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಿಗಧಿತ ಅವಧಿ ಇರುವಂತಾಗಬೇಕು ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಹೇಳಿದ್ದಾರೆ. ಅಲ್ಲದೆ ಚುನಾವಣೆಗಳನ್ನು ಫೆಬ್ರವರಿ ತಿಂಗಳಲ್ಲಿ ನಿಗದಿ ಪಡಿಸಬೇಕು ಎಂದೂ ಅವರು ಅಭಿಪ್ರಾಯಿಸಿದ್ದಾರೆ.ಅವರು ಇಲ್ಲಿ ತಮ್ಮ ಮತಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಆಯೋಗವು ಲೋಕಸಭಾ ಮತ್ತು ವಿಧಾನಸಭೆಗಳಿಗೆ ನಿಗಧಿತ ಅವಧಿಯನ್ನು ನಿರ್ಧರಿಸುವಂತೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಕುರಿತು ಯೋಚಿಸಬೇಕು ಎಂಬುದಾಗಿ 81ರ ಹರೆಯದ ಆಡ್ವಾಣಿ ಹೇಳಿದ್ದಾರೆ.
ನಾವು ಬ್ರಿಟನ್ ಪದ್ಧತಿಯನ್ನು ಅನುಸರಿಸುತ್ತಿದ್ದು, ಇದು ನಮಗೆ ಹೊಂದಿಕೆಯಾಗದ ಕಾರಣ ನಾವು ಈ ಪದ್ಧತಿಯನ್ನು ಬದಲಿಸುವ ಕುರಿತು ಚಿಂತಿಸಬೇಕು ಎಂದು ಅವರು ಹೇಳಿದರು.
ನಿಗಧಿತ ಅವಧಿಯ ಅವರ ಇಂಗಿತವೇನೆಂದರೆ, ಒಂದು ವೇಳೆ ಸರ್ಕಾರವೊಂದು ಬಹುಮತ ಕಳೆದುಕೊಂಡರೂ, ಸದನವನ್ನು ವಿಸರ್ಜಿಸದೇ, ಹೊಸ ಸರ್ಕಾರ ಅಧಿಕಾರ ಹಿಡಿಯುವಂತಾಗಬೇಕು ಎಂದು ನುಡಿದರು.
ಬೇಸಿಗೆಕಾಲದಲ್ಲಿ ಚುನಾವಣೆಗಳನ್ನು ನಡೆಸಿದರೆ, ಜನತೆಗೆ ಕಷ್ಟವಾಗುತ್ತಿದ್ದು, ಇದರಿಂದ ಮತದಾನದ ಶೇಖಡಾವಾರು ಕುಸಿಯುತ್ತದೆ ಎಂದ ಅವರು, ಇದಕ್ಕಾಗಿ ಚುನಾವಣೆಗಳು ಫೆಬ್ರವರಿ ತಿಂಗಳಲ್ಲಿ ನಡೆಯುವಂತಾಗಬೇಕು ಎಂದು ನುಡಿದರು. ಇದಲ್ಲದೆ, ಮತದಾನದಿಂದ ಜನತೆ ವಿಮುಖರಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರಲ್ಲದೆ ಮತದಾನವನ್ನು ಖಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯ ಸೂಚಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದೆಯಲ್ಲದೆ, ಕೇಂದ್ರದಲ್ಲಿ ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಡ್ವಾಣಿ ಅವರು ಮುಂಜಾನೆ ಪತ್ನಿ ಸಮೇತರಾಗಿ ಮತಗಟ್ಟೆಗೆ ತೆರಳಿ ಮತಚಲಾಯಿಸಿದರು.