ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮತಯಂತ್ರ ಸೇರಿದ ಘಟಾನುಘಟಿಗಳ 'ಭವಿಷ್ಯ'
ಮತಸಮರ
WD
ರಾಜ್ಯದ 11 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.60ರಷ್ಟು ಶಾಂತಿಯುತ ಮತದಾನ ನಡೆದಿದ್ದು, ಘಟಾನುಘಟಿಗಳಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ,ಮಾಜಿ ಸಚಿವ ಜನಾರ್ದನ ಪೂಜಾರಿ, ಚಲುವರಾಯಸ್ವಾಮಿ, ನಟ ಅಂಬರೀಷ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ, ಜಯಪ್ರಕಾಶ್ ಹೆಗ್ಡೆ ಸೇರಿದಂತೆ 156 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಮತಯಂತ್ರ ದೋಷ, ಮತದಾನ ಬಹಿಷ್ಕಾರದಂತಹ ಘಟನೆಗಳನ್ನು ಹೊರತುಪಡಿಸಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.

2ನೇ ಹಂತದ ಮತದಾನದಲ್ಲಿ ನಗರ, ಪಟ್ಟಣ ಪ್ರದೇಶಗಳಲ್ಲಿ ಮತ ಚಲಾಯಿಸಲು ಹೆಚ್ಚಿನ ಆಸಕ್ತಿ ಕಂಡು ಬಂದಿಲ್ಲ, ಗ್ರಾಮೀಣ ಪ್ರದೇಶದಲ್ಲಿ ಮತದಾರರು ಆಸಕ್ತಿಯಿಂದ ಮತ ಚಲಾಯಿಸಿದರು.

WD
ಮತದಾನ ಬಹಿಷ್ಕಾರ: ರಾಜಕಾರಣಿಗಳ ಸುಳ್ಳಿನ ಆಶ್ವಾಸನೆ, ನಿರ್ಲಕ್ಷ್ಯದಿಂದ ರೋಸಿಹೋದ ಗ್ರಾಮಸ್ಥರು ಹಲವೆಡೆ ಮತದಾನವನ್ನು ಬಹಿಷ್ಕರಿಸಿದ ಘಟನೆ ಗುರುವಾರ ನಡೆದಿದೆ. ಹುಬ್ಬಳ್ಳಿಯ ಸುತಗಟ್ಟೆ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದರು.

ಮಂಡ್ಯಲೋಕಸಭಾ ಕ್ಷೇತ್ರದ ಮಾದೇಗೌಡನ ಕೊಪ್ಪಲು, ಚಿಕ್ಕಕೊಪ್ಪಲ ಹಾಗೂ ಮಾರಚಿಕನಹಳ್ಳಿಯ ಸುಮಾರು 1450ಮಂದಿ ಮತದಾನ ಬಹಿಷ್ಕರಿಸಿದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕೆಂಚಾಪುರ, ಶಿರಗಳ್ಳಿ, ಮತ್ತಿಗಟ್ಟೆ ಗ್ರಾಮದ ಮತದಾರರೂ ಅದೇ ಹಾದಿ ಹಿಡಿದಿದ್ದರು.
ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿರುವ ಬಗ್ಗೆ ಅಲ್ಲಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಉಡುಪಿಯ ಆದಿ ಉಡುಪಿಯ ಮತಗಟ್ಟೆಯಲ್ಲಿ 50ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾದ ಬಗ್ಗೆ ಪ್ರತಿಭಟನೆ ನಡೆಸಿದರು.

ಬಾಗಲಕೋಟೆ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ-ಕನ್ನಡ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಧಾರವಾಡ, ದಾವಣಗೆರೆ, ಹಾಸನ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 156 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 1.55ಕೋಟಿ ಮತದಾರರು ಸಂಸತ್‌ನಲ್ಲಿ ತಮ್ಮನ್ನು ಪ್ರತಿನಿಧಿಸುವ ನಾಯಕನ ಹಣೆಬರಹವನ್ನು ಮತಚಲಾಯಿಸುವ ಮೂಲಕ ನಿರ್ಧರಿಸಿದ್ದಾರೆ.

ರಾಜ್ಯದ 28 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಿಗೆ ಏ.23ರಂದು ಮತದಾನ ನಡೆದಿತ್ತು. ಮೇ 16ರಂದು ನಡೆಯುವ ಮತಎಣಿಕೆಯಲ್ಲಿ ಸಂಸತ್ ಪ್ರವೇಶಿಸುವ ಅದೃಷ್ಟಶಾಲಿಗಳು ಯಾರೆಂಬುದು ಬಹಿರಂಗವಾಗಲಿದೆ.

ಬಾಗಲಕೋಟೆ-ಶೇ.57, ಹಾವೇರಿ-ಶೇ.54, ಧಾರವಾಡ-ಶೇ.57, ದಾವಣಗೆರೆ-ಶೇ.60.20, ಶಿವಮೊಗ್ಗ-ಶೇ.62, ಉಡುಪಿ-ಚಿಕ್ಕಮಗಳೂರು-ಶೇ.62.50, ಹಾಸನ-ಶೇ.68.50, ದಕ್ಷಿಣಕನ್ನಡ-ಶೇ.72, ಮಂಡ್ಯ-ಶೇ.57.50, ಮೈಸೂರು-ಶೇ.56, ಚಾಮರಾಜನಗರ-ಶೇ.58ರಷ್ಟು ಮತದಾನ (ಸಂಜೆ 5.30ರ ಅಂಕಿ-ಅಂಶದಂತೆ) ದಾಖಲಾಗಿದೆ.