ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಮತಯಂತ್ರದೊಳಗೆ ಭದ್ರವಾದ ಅಭ್ಯರ್ಥಿಗಳ ಹಣೆಬರಹ
ಮತಸಮರ
ಮಾಜಿ ಪ್ರಧಾನಿ ದೇವೇ ಗೌಡ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಸೇರಿದಂತೆ ಘಟಾನುಘಟಿಗಳ ಹಣೆಬರಹ ನಿರ್ಧರಿಸಲಿರುವ ತೃತೀಯ ಹಂತದ ಚುನಾವಣೆ ಅಂತ್ಯಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯವು ಮತಯಂತ್ರದಲ್ಲಿ ಬಂಧಿಯಾಗಿದೆ.

ಹದಿನೈದನೇ ಲೋಕಸಭಾ ಚುನಾವಣೆಯ ತೃತೀಯ ಹಂತದಲ್ಲಿ 107 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಈ ಹಂತದಲ್ಲಿ ರಾಷ್ಟ್ರಾದ್ಯಂತ ಹದಿನಾರುವರೆ ಕೋಟಿ ಮತದಾರರು ಅರ್ಹತೆ ಪಡೆದಿದ್ದರು. ಕರ್ನಾಟಕ ಸೇರಿದಂತೆ ಒಟ್ಟು ಒಂಬತ್ತು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಿತು ಇದರಲ್ಲಿ ಸಿಕ್ಕಿಂನಲ್ಲಿ ವಿಧಾನಸಭಾ ಚುನಾವಣೆಗಳೂ ನಡೆದವು.

ಒಟ್ಟಾರೆಯಾಗಿ ತೃತೀಯ ಹಂತದಲ್ಲಿ ಅಂದಾಜು ಶೇ.50ರಷ್ಟು ಮತದಾನವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಿಖರವಾದ ಅಂಕಿಅಂಶಗಳು ಇನ್ನಷ್ಟೆ ಲಭ್ಯವಾಗಬೇಕಿದೆ. ರಾಜ್ಯದಲ್ಲಿ ಶೇ.60 ಮತದಾನವಾಗಿದೆ. ಗುಜರಾತ್ ಶೇ.45, ಉತ್ತರಪ್ರದೇಶದಲ್ಲಿ ಶೇ.45, ಮಧ್ಯಪ್ರದೇಶದಲ್ಲಿ ಶೇ.45, ಮಹಾರಾಷ್ಟ್ರದಲ್ಲಿ ಶೇ.45, ಜಮ್ಮುಕಾಶ್ಮೀರದಲ್ಲಿ ಶೇ.25 ಹಾಗೂ ಬಿಹಾರದಲ್ಲಿ ಶೇ.48ರಷ್ಟು ಮತದಾನವಾಗಿದೆ.

ನಾಲ್ಕನೆ ಮತ್ತು ಐದನೆ ಹಂತದ ಮತದಾನವು ಅನುಕ್ರಮವಾಗಿ ಮೇ 7 ಮತ್ತು 13ರಂದು ನಡೆಯಲಿದ್ದು, ಮತಎಣಿಕೆಯು ಮೇ 16ರಂದು ನಡೆಯಲಿದ್ದು, ಅಂದು ಸಂಜೆಯೊಳಗಾಗಿ ಮುಂದಿನ ಲೋಕಸಭೆಯ ಸ್ಪಷ್ಟ ಚಿತ್ರಣ ಲಭಿಸಲಿದೆ.

ಬಿಜೆಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟಗಳೆರಡೂ ಸ್ಪಷ್ಟ ಬಹುಮತ ಪಡೆಯುವ ವಿಶ್ವಾಸ ಹೊಂದಿದ್ದು ಅಧಿಕಾರದ ಕನಸು ಕಾಣುತ್ತಿವೆ.

ಗುಜರಾತ್, ಜಮ್ಮು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರ ನಗರ್ ಹವೇಲಿ ಮತ್ತು ಡಿಯು ಡಾಮನ್‌ನಲ್ಲಿ ಮತದಾನ ನಡೆಯಿತು.

ಬೆಳಬೆಳಿಗ್ಗೆಯೇ ಮತಚಲಾಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ತಮ್ಮ ಬಹುಜನ ಸಮಾಜವಾದಿ ಪಕ್ಷವು ರಾಜ್ಯದ 80 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಬಗಲಿಗೆ ಹಾಕಿಕೊಳ್ಳಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದರು.

ಮತಚಲಾಯಿಸುವ ಮೂಲಕ ತನ್ನ ದಿನವನ್ನು ಆರಂಭಿಸಿರುವೆ, ಇದು ಪ್ರತಿಯೊಬ್ಬರ ಪ್ರಧಾನ ಕರ್ತವ್ಯ ಎಂಬುದಾಗಿ ತಾನು ಭಾವಿಸುವುದಾಗಿ ಮಾಯಾ ಹೇಳಿದ್ದಾರೆ.

ಬಾಲಿವುಡ್ ತಾರೆಗಳಾದ ಅಮೀರ್ ಖಾನ್ ದಂಪತಿ, ಹೃತಿಕ್ ರೋಷನ್, ಶಾರೂಖ್ ಖಾನ್, ಬಾಲಿವುಡ್ ಪ್ರಥಮ ಕುಟುಂಬವಾದ ಬಚ್ಚನ್ ಕುಟುಂಬದ ಎಲ್ಲಾ ಸದಸ್ಯರು ಮತಚಲಾಯಿಸಿಸದರು. ಇವರಲ್ಲದೆ, ರಿಷಿ ಕಪೂರ್, ಸೋನಮ್ ಕಪೂರ್, ರಾಹುಲ್ ಬೋಸ್, ಸುಶ್ಮಾ ರೆಡ್ಡಿ, ಅಮೃತಾ ರಾವ್, ಸೋನಾಲಿ ಬೇಂದ್ರೆ, ಸೇರಿದಂತೆ ನಟ-ನಟಿಯರು ತಮ್ಮ ಪರಮೋಚ್ಚ ಹಕ್ಕು ಚಲಾಯಿಸಿದರು.

ಉದ್ಯಮಿ ಅನಿಲ್ ಅಂಬಾನಿ, ಕ್ರಿಮಿನಲ್ ಲಾಯರ್ ಮಹೇಶ್ ಜೇಠ್ಮಲಾನಿ, ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಸೇರಿದಂತೆ ಜನತೆ ಭಯೋತ್ಪಾದನೆಯ ಕರಿನೆರಳು ಬಿದ್ದಿರುವ ಮುಂಬೈಯಲ್ಲಿ ಮತದಾನ ಮಾಡಿದರು.

ಜಮ್ಮು ಕಾಶ್ಮೀರದಲ್ಲಿ ಒಂದು ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಶಾಂತಿಯುತ ಮತದಾನ ನಡೆದಿತ್ತು. ಇಲ್ಲಿ ಪ್ರತ್ಯೇಕತಾವಾದಿಗಳು ಚುನಾವಣೆ ಬಹಿಷ್ಕರಿಸಿದ್ದರು. ಇಲ್ಲಿ ಅತ್ಯಂತ ಕಡಿಮೆ ಶೇ.25ರಷ್ಟು ಮತದಾನವಾಗಿದೆ.

ಪಶ್ಚಿಮಬಂಗಾಳದಲ್ಲಿ ನಕ್ಸಲರ ಉಪಟಳ, ನೆಲಬಾಂಬ್ ಸ್ಫೋಟ ಹಾಗೂ ಸಣ್ಣಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ರಾಷ್ಟ್ರಾದ್ಯಂತ ಶಾಂತಿಯುತವಾಗಿ ಯಶಸ್ವಿಯಾಗಿ ನಡೆದಿದೆ.