ಮನಮೋಹನ್ ಸಿಂಗ್ ಯುಪಿಎ ಪ್ರಧಾನಿ ಅಭ್ಯರ್ಥಿ: ರಾಹುಲ್ ಪುನರುಚ್ಚಾರ
ಬಾರ್ಮಾರ್, ಭಾನುವಾರ, 3 ಮೇ 2009( 17:54 IST )
ಮನಮೋಹನ್ ಸಿಂಗ್ ಅವರೇ ಯುಪಿಎ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂದು ಪುನರುಚ್ಚರಿಸಿರುವ ಕಾಂಗ್ರೆಸ್ ಯುವನೇತಾರ ರಾಹುಲ್ ಗಾಂಧಿ, ಪಕ್ಷದಲ್ಲಿ ಪ್ರಧಾನಿ ಪಟ್ಟಕ್ಕೆ ಹುದ್ದೆ ಖಾಲಿ ಎಲ್ಲ ಎಂದು ಹೇಳಿದ್ದಾರೆ.
ಮನಮೋಹನ್ ಸಿಂಗ್ ಅವರು ನಮ್ಮ ಪ್ರಧಾನಿ. ಅವರು ಯುಪಿಎಯ ಪ್ರಧಾನಿ ಎಂದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೀಶ್ ಚೌಧರಿ ಪರ ಪ್ರಚಾರ ಭಾಷಣ ಮಾಡುತ್ತಿದ್ದ ಅವರು ನುಡಿದರು.
ಭಾರತ ಪ್ರಕಾಶಿಸುತ್ತಿದೆ ಎಂಬ ಕಳೆದ ಬಾರಿಯ ಬಿಜೆಪಿಯ ಜಾಹೀರಾತನ್ನು ಟೀಕಿಸಿದ ರಾಹುಲ್, "ಎನ್‌ಡಿಎಗೆ ಭಾರತ ಪ್ರಕಾಶಿಸುವ ಸಿದ್ಧಾಂತವಿದೆ. ಅದರ ಭಾರತವು ಶೇರುಮಾರುಕಟ್ಟೆಗೆ, ಖಾಸಗಿಕರಣಕ್ಕೆ, ಶ್ರೀಮಂತ ಮತ್ತು ಕುಲೀನರಿಗಾಗಿ" ಎಂದು ಟೀಕಿಸಿದರು.
ಆದರೆ ಕಾಂಗ್ರೆಸ್ ಸಿದ್ಧಾಂತವು ಅಭಿವೃದ್ಧಿ ಮತ್ತು ಬಡವರ ಪರವಾಗಿದೆ, ರಾಷ್ಟ್ರದಲ್ಲಿ ಏಕೈಕ ಬಡವ್ಯಕ್ತಿ ಜೀವಿಸುತ್ತಿದ್ದರೂ ತಾನು ಭಾರತ ಪ್ರಕಾಶಿಸುತ್ತಿದೆ ಎನ್ನಲಾರೆ ಎಂದವರು ಹೇಳಿದರು.
ರೈತರ ಕುರಿತು ಎನ್‌ಡಿಎ ಬದ್ಧತೆಯನ್ನು ಪ್ರಶ್ನಿಸಿದ ಅವರು "ಆಂಧ್ರದ ಎನ್‌ಡಿಎಯ ಮಿತ್ರಪಕ್ಷ ಒಂದು ರಾಷ್ಟ್ರದಲ್ಲಿ ನೂರಾರು ಕಾಲ್‌ಸೆಂಟರ್‌ಗಳು ಕಾರ್ಯಾಚರಿಸುತ್ತಿರುವ ಕಾರಣ ರಾಷ್ಟ್ರಕ್ಕೆ ರೈತರ ಅವಶ್ಯಕತೆ ಇಲ್ಲ" ಎಂದು ಹೇಳಿತ್ತು ಎಂಬುದಾಗಿ ವ್ಯಂಗ್ಯವಾಡಿದರು.
ಎನ್‌ಡಿಎ ಬಡವರನ್ನು ಮರೆತಿದೆ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರೈತರೇ ಹೆಚ್ಚಾಗಿ ಸೇರಿದ್ದ ಸಮಾವೇಶದಲ್ಲಿ, ಯುಪಿಎ ಸರ್ಕಾರ ರೈತರ ಸಾಲಮನ್ನಾ ಮಾಡಿದೆ ಎಂಬುದನ್ನು ನೆನಪಿಸಿದರು.