ಚುನಾವಣೋತ್ತರ ಮೈತ್ರಿಯ ಅವಶ್ಯಕತೆ ಬಿದ್ದರೆ ಎಐಎಡಿಎಂಕೆ ಮತ್ತು ಬಿಎಸ್ಪಿಯೊಂದಿಗೆ ಹೊಂದಾಣಿಕೆಯ ಪರಿಸ್ಥಿತಿ ಉದ್ಭವವಾಗದೇ ಇರಲಿ ಎಂಬುದು ಕಾಂಗ್ರೆಸ್ ಬಯಕೆ. ಆದರೆ ಇನ್ನೋರ್ವ ಪ್ರಭಾವಿ ಮಹಿಳೆ ತೃಣಮೂಲ ಕಾಂಗ್ರೆಸ್‌ನ ಮಮತಾರೊಂದಿಗೆ ಕಾಂಗ್ರೆಸ್ ಚುನಾವಣೆ ಪೂರ್ವವಾಗೇ ಸ್ಥಾನಹೊಂದಾಣಿಕೆ ಮಾಡಿಕೊಂಡಿದೆ.
ಒಂದೊಮ್ಮೆ ಚುನಾವಣೋತ್ತರ ಪರಿಸ್ಥಿತಿಗಳು ಸಂಖ್ಯಾ ಆಟದಲ್ಲಿ ಈ ಮೂವರು ಮಹಿಳಾಮಣಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅನಿವಾರ್ಯತೆ ತಂದಿಟ್ಟರೆ, ಇವರು ಯೂವತ್ತಿದ್ದರೂ ಮೈತ್ರಿಗೆ ಬೆದರಿಕೆಯೇ ಎಂಬುದು ಪರಿಣಿತರ ಲೆಕ್ಕಾಚಾರ.
ಇವರು ಇದುವರೆಗೆ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೇ ಇದ್ದರೂ, ವಾಸ್ತವವೆಂದರೆ 60ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಬಲ್ಲ ಸಾಮರ್ಥ್ಯ ಇರುವ ಇವರನ್ನು ಮೇ.16ರ ಬಳಿಕ ಓಲೈಸಬೇಕಾಗುವ ಪರಿಸ್ಥಿತಿ ಒದಗಿಬರಬಹುದು. ತಮಿಳ್ನಾಡು ಮತ್ತು ಉತ್ತರಪ್ರದೇಶದ ಈ ಇಬ್ಬರೊಂದಿನ ಮೈತ್ರಿಯು ದ್ವಿತೀಯ ಹಂತದ ರಕ್ಷಣೆ ಮಾತ್ರ ಎಂಬುದು ಕಾಂಗ್ರೆಸ್ ಅಭಿಪ್ರಾಯ. ಒಂದೊಮ್ಮೆ ಇವರೊಂದಿಗೆ ಮೈತ್ರಿಗೆ ಮುಂದಾದರೆ, ತಮ್ಮ ಬೆಂಬಲಕ್ಕಾಗಿ ಅವರು ಭಾರೀಯಾದ ಬೆಲೆಯನ್ನು ನಿರೀಕ್ಷಿಸಬಹುದು ಎಂಬುದು ಲೆಕ್ಕಾಚಾರ. ಎಐಎಡಿಎಂಕೆಯೊಂದಿಗಿನ ಮೈತ್ರಿಯು ಕರುಣಾನಿಧಿಯವರ ಡಿಎಂಕೆ ಸರ್ಕಾರಕ್ಕೆ ಕುತ್ತುಂಟುಮಾಡಬಹುದು. ಡಿಎಂಕೆಯು ತನ್ನ ಉಳಿವಿಗಾಗಿ ಕಾಂಗ್ರೆಸ್ಸನ್ನು ಅವಲಂಭಿಸಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿ ಕೂಟವು ತಮಿಳ್ನಾಡಿನ ಎಲ್ಲಾ 39 ಸ್ಥಾನಗಳನ್ನು ಗುಡಿಸಿತ್ತು. ಆದರೆ, ನಿರೀಕ್ಷೆಗಳ ಪ್ರಕಾರ ಈ ಬಾರಿ ಪರಿಸ್ಥಿತಿಯು ಇದಕ್ಕ ವ್ಯತಿರಿಕ್ತವಾಗಿರುತ್ತದೆ ಎನ್ನಲಾಗಿದೆ.
ರಾಜಕೀಯ ತಜ್ಞರ ಪ್ರಕಾರ ಎಐಎಡಿಎಂಕೆ-ಪಿಎಂಕೆ-ಎಂಡಿಎಂಕೆ-ಎಡಪಕ್ಷಗಳ ಮೈತ್ರಿಯು ಎಲ್ಲಾ 39ಸ್ಥಾನಗಳನ್ನು ಗೆಲ್ಲುವುದು ಕಷ್ಟಸಾಧ್ಯ. ಇವುಗಳು 27 ಸ್ಥಾನಗಳನ್ನು ಗೆಲ್ಲಬಹುದು ಎಂಬುದು ಒಂದು ಲೆಕ್ಕಾಚಾರ. ಚುನಾವಣೆ ಬಳಿಕ ರಾಮದಾಸ್ ಅವರ ಪಿಎಂಕೆಯು ಮತ್ತೆ ಕಾಂಗ್ರೆಸ್‌ನತ್ತ ವಾಲಿದರೆ, ಎಐಎಡಿಎಂಕೆ ಮತ್ತು ಯುಪಿಎ ನಡುವಿನ ಅಂತರ ಕಮ್ಮಿಯಾಗುತ್ತದೆ. ಇದಲ್ಲದೆ ಮತಎಣಿಕೆ ಬಳಿಕ ಎಐಎಡಿಎಂಕೆ ಮತ್ತು ಎಡಪಕ್ಷಗಳ ನಡುವೆ ಒಡಕುಂಟಾದರೂ ಇದರಿಂದಲೂ ಯುಪಿಎಯೊಂದಿಗಿನ ಅಂತರ ಮತ್ತಷ್ಟು ಕಡಿಮೆಯಾಗುತ್ತದೆ.
ಈ ಮಧ್ಯೆ, 80 ಸ್ಥಾನಗಳಿರುವ ಉತ್ತರಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿಗಳು ಗೆಲ್ಲುವ ಸ್ಥಾನದಲ್ಲಿ ಹೆಚ್ಚು ಅಂತರವಿರಲಾರದು ಎಂಬ ಲೆಕ್ಕಾಚಾರವೂ ಸಹ ಕಾಂಗ್ರೆಸ್ ಅನ್ನು ನಿರಾಳವಾಗಿಸಿದೆ. ಬಿಎಸ್ಪಿಗಿಂತ ಕಾಂಗ್ರೆಸ್‌ಗೆ ಎಸ್ಪಿ ಹೆಚ್ಚು ಸಹ್ಯ.
ಈ ಕುರಿತಂತೆ ಬಿಜೆಪಿಯನ್ನು ತಕ್ಕಡಿಗೆ ಹಾಕಿದರೆ, ಅದು ಸುಲಭವಾಗಿ ಎಐಎಡಿಎಂಕೆ ಅಥವಾ ತೃಣಮೂಲ ಕಾಂಗ್ರೆಸ್‌ನೊಂದಿಗೆ ಹೊಂದಿಕೊಳ್ಳಬಹುದು. ಅಲ್ಲದೆ ಅದು ಬಿಎಸ್ಪಿ ಜತೆಗೂ ಹೊಂದಾಣಿಕೆಗೆ ಸಿದ್ಧವಿದೆ. ಆದರೆ ಈ ಹಿಂದೆ ಬಿಎಸ್ಪಿಯೊಂದಿಗಿನ ಒಡನಾಟದಿಂದ ಅದು ಒಮ್ಮೆ ಕೈಸುಟ್ಟುಕೊಂಡಿದೆ ಎಂಬುದನ್ನು ಮರೆಯುವಂತಿಲ್ಲ.