ಬಾಬರಿ ಮಸೀದಿ ಧ್ವಂಸ ಕುರಿತು ತನ್ನನ್ನು ಕತ್ತಲಿನಲ್ಲಿ ಇಡಲಾಗಿತ್ತು ಎಂಬುದಾಗಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಹೇಳಿಕೆ ನೀಡಿರುವ ಬೆನ್ನಿಗೆ, ಬಾಬರಿ ಮಸೀದಿ ಧ್ವಂಸ ಕುರಿತಂತೆ ಎಲ್ಲರೂ ಕತ್ತಲಿನಲ್ಲಿದ್ದರು ಎಂಬುದಾಗಿ ರಾಮಮಂದಿರ ನಿರ್ಮಾಣ ಚಳುವಳಿಯ ಮುಂಚೂಣಿ ನಾಯಕಿ ಉಮಾಭಾರತಿ ಹೇಳಿದ್ದಾರೆ.
"...ವಾಸ್ತವವಾಗಿ ಅದನ್ನು ಉರುಳಿಸಿದವರ ಹೊರತಾಗಿ ಮಿಕ್ಕವರೆಲ್ಲರೂ ಈ ವಿಚಾರದ ಕುರಿತು ಕತ್ತಲಿನಲ್ಲಿದ್ದರು. ಅದನ್ನು ಯಾರು ಮಾಡಿದ್ದಾರೆಂದು ನಮಗಿನ್ನೂ ಗೊತ್ತಿಲ್ಲ" ಎಂಬುದಾಗಿ ಅವರು ಇಲ್ಲಿಗೆ ಸಮೀಪದ ಅಟ್ರೌಲಿಯಲ್ಲಿ ಹೇಳಿದ್ದಾರೆ.
ಕಲ್ಯಾಣ್ ಸಿಂಗ್ ಅವರನ್ನು ಬಾಬರಿ ಮಸೀದಿ ಧ್ವಂಸ ಮಾಡುವ ವಿಚಾರದ ಕುರಿತು ನಿರ್ದಿಷ್ಟವಾಗಿ ಕತ್ತಲಿನಲ್ಲಿರಿಸಲಾಗಿತ್ತೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಮಾ, "ಈ ಕುರಿತು ನನಗೇನೂ ತಿಳಿದಿಲ್ಲ. ಅಡ್ವಾಣಿಜಿ ಮತ್ತು ಹೂವೆ ಶೇಷಾದ್ರಿಜಿ (ಆರೆಸ್ಸೆಸ್‌ನ) ಅವರೂ ಇದನ್ನೇ ಹೇಳಿದ್ದಾರೆ.(ಮಸೀದಿಯನ್ನು ಉರುಳಿಸಲಾಗುತ್ತದೆ ಎಂಬ ಅರಿವಿರಲಿಲ್ಲ ಎಂಬುದಾಗಿ)" ಎಂದು ಹೇಳಿದರು.
ಮಸೀದಿಯನ್ನು ಉರುಳಿಸಿದವರ್ಯಾರು ಎಂಬದನ್ನು ಇನ್ನಷ್ಟೆ ಗುರುತಿಸಬೇಕಾಗಿದೆ ಎಂದು ಜನಶಕ್ತಿ ನಾಯಕಿ ಹೇಳಿದ್ದಾರೆ.
1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಉರುಳಿಸಿರುವ ಘಟನೆಯನ್ನು ಮೊದಲೇ ಯೋಜಿಸಲಾಗಿತ್ತು ಮತ್ತು ಈ ಕುರಿತು ತನ್ನನ್ನು ಕತ್ತಲಿನಲ್ಲಿರಿಸಲಾಗಿತ್ತು ಎಂಬುದಾಗಿ, ಇದೀಗ ಬಿಜೆಪಿ ತೊರೆದಿರುವ ಕಲ್ಯಾಣ್ ಸಿಂಗ್ ಹೇಳಿದ್ದರು. ಅಲ್ಲದೆ ರಾಮಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಸೂಚ್ಯವಾಗಿ 'ಕರಸೇವೆ' ಮಾಡಲಾಗುವುದು ಎಂಬುದಾಗಿ ಮಾತ್ರ ತನಗೆ ಹೇಳಲಾಗಿತ್ತು ಎಂದು ಅವರು ಹೇಳಿದ್ದರು.