ಭಯೋತ್ಪಾನೆ ಕುರಿತು 'ಕಠಿಣ ನಿಲುವು' ಕೈಗೊಂಡಿದ್ದೇವೆ ಎಂಬುದಾಗಿ ಹೇಳುತ್ತಿರುವ ಬಿಜೆಪಿಯ ನಿಲುವನ್ನು ಪ್ರಶ್ನಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಬಿಜೆಪಿಯ ಹೇಳಿಕೆಗಳು ಮತ್ತು ಅದು ಮೂಡಿಸಿರುವ ದಾಖಲೆಗಳು ಪರಸ್ಪರ ಭಿನ್ನವಾಗಿದೆ ಎಂದು ಹೇಳಿದ್ದಾರೆ.
"ಭಯೋತ್ಪಾದನೆಯ ವಿರುದ್ಧ ನಾವು ಮಾತ್ರ ಸುಧೃಡವಾದ ನಿಲುವನ್ನು ಕೈಗೊಳ್ಳಬಹುದಾಗಿದೆ ಎಂಬುದಾಗಿ ನಮ್ಮ ವಿರೋಧಿಗಳು ಹೇಳುತ್ತಾ ಬರುತ್ತಿದ್ದಾರೆ. ಆದರೆ ಅವರ ದಾಖಲೆಗಳನ್ನು ಗಮನಿಸಿದರೆ ಸಂಪೂರ್ಣವಾದ ವಿಭಿನ್ನ ಚಿತ್ರಣವು ದೊರೆಯುತ್ತದೆ" ಎಂದು ಇಲ್ಲಿಂದ ಸುಮಾರು 30 ಕಿ.ಮೀ ದೂರದ ಪೆಯೊವ ಎಂಬಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ಸಿಂಗ್ ಹೇಳಿದ್ದಾರೆ.
ಬಂಧನದಲ್ಲಿ ಮೂವರು ಅತ್ಯುಗ್ರರನ್ನು ಬಿಜೆಪಿಯು ಅಘ್ಘಾನಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದಿದೆ ಎಂಬುದಾಗಿ ಅವರು ಕಾಂಧಹಾರ್ ವಿಮಾನ ಅಪಹರಣವನ್ನು ಉಲ್ಲೇಖಿಸುತ್ತಾ ನುಡಿದರು.
ಬಿಜೆಪಿಯ ಆಡಳಿತದಲ್ಲಿ ಭಯೋತ್ಪಾದಕರು ಸಂಸತ್ತಿನ ಮೇಲೆ ದಾಳಿ ನಡೆಸಿದರು, ಕೆಂಪುಕೋಟೆ ಹಾಗೂ ರಘುನಾಥ ದೇವಾಲಯ, ಅಕ್ಷರಧಾಮ ಮತ್ತು ಜಮ್ಮು ಕಾಶ್ಮೀರ ಶಾಸನ ಸಭೆ ಮೇಲೆ ದಾಳಿ ನಡೆಸಿದ್ದರು. ಇದಲ್ಲದೆ ಉಗ್ರರು ಕಾರ್ಗಿಲ್ ಪ್ರವೇಶಿಸಿದ್ದರು. ಆದರೆ ಬಿಜೆಪಿಗೆ ವಸ್ತುಸ್ಥಿತಿಯ ಅರಿವಿದ್ದಿರಲಿಲ್ಲ ಎಂದವರು ಲೇವಡಿ ಮಾಡಿದರು.
"ಇದು ಬಿಜೆಪಿಯ ದಾಖಲೆಗಳು. ಬಿಜೆಪಿಯ ಈ ನಾಯಕರು ಎಷ್ಟು ಸುದೃಢರು ಮತ್ತು ನಿರ್ಣಾಯಕರು ಎಂಬುದನ್ನು ನಿವೇ ನಿರ್ಧರಿಸಿ" ಎಂದವರು ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ನುಡಿದರು.
ಭಯೋತ್ಪಾದನೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕ್ರಮಗಳನ್ನು ಸಮೀಕರಿಸಿದ ಅವರು, ಮುಂಬೈ ದಾಳಿಯ ವೇಳೆಗೆ ಯುಪಿಎ ಸರ್ಕಾರವು ಅವರನ್ನು ಎದುರಿಸುವ ಶೌರ್ಯದ ನಿರ್ಧಾರ ಕೈಗೊಂಡಿತು ಎಂದವರು. "ನಾವು ಭಯೋತ್ಪಾದನೆಯನ್ನು ಸಂಪೂರ್ಣ ಬದ್ಧತೆಯೊಂದಿಗೆ ಧೈರ್ಯದಿಂದ ಎದುರಿಸಲಿದ್ದೇವೆ" ಎಂಬ ಭರವಸೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು.