ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ಕ್ರಮಕೈಗೊಳ್ಳಲು ಒಬ್ಬ ಸಿಖ್ ಆಗಿದ್ದೂ, ಪ್ರಧಾನಿ ಮನಮೋಹನ್ ಸಿಂಗ್ ವಿಫಲಾಗಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೂರಿದ್ದಾರೆ.
ಅಲ್ಲದೆ, ಮನಮೋಹನ್ ಸಿಂಗ್ ಆಡಳಿತವು ಸಂಪೂರ್ಣ ವಿಫಲವಾಗಿದೆ ಎಂದೂ ದೂರಿದರು. ಮೋದಿ ಇಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದರು.
ಪಾಕಿಸ್ತಾನದಲ್ಲಿನ ಸಿಖ್ಖರ ಮೇಲೆ ತಾಲಿಬಾನ್ ಬಲವಂತದ ತೆರಿಗೆ(ಜಜಿಯಾ) ಹೇರಿದ್ದು ಹಿಂಸೆ ನೀಡುತ್ತಿದೆ. ಒಬ್ಬ ಸಿಖ್ ಆಗಿದ್ದೂ, ಪ್ರಧಾನಿ ಸಿಂಗ್ ಪಾಕಿಸ್ತಾನದ ಸಿಖ್ ಸಮುದಾಯದ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದ ಬಿಜೆಪಿ ನಾಯಕ, ಅವರು ಅಧಿಕಾರ ತ್ಯಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮತ್ತು ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಸೇರಿದಂತೆ ಹಲವು ಹಿರಿಯ ಯುಪಿಎ ನಾಯಕರಿಗೆ ಮನಮೋಹನ್ ಸಿಂಗ್ ಅವರು ಮತ್ತೆ ಪ್ರಧಾನಿ ಪಟ್ಟ ಏರುವುದು ಪಥ್ಯವಿಲ್ಲ ಎಂದು ಹೇಳಿದರು.
'ಗಾಂಧಿ' ಕುಟುಂಬದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಅವರುಗಳು ಮಾತ್ರ ಸಿಂಗ್ ಅವರನ್ನು ಒಬ್ಬ ಯಶಸ್ವೀ ಪ್ರಧಾನಿ ಎಂಬುದಾಗಿ ಹಾಡಿಹೊಗಳುತ್ತಿದ್ದಾರೆ. ಆದರೆ, ವಾಸ್ತವಾಂಶವೆಂದರೆ, ಒಬ್ಬ ಪ್ರಧಾನಿಯಾಗಿ ಮನಮೋಹನ್ ಸಿಂಗ್ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲಾಗಿದ್ದಾರೆ ಎಂದು ಮೋದಿ ನುಡಿದರು.
ರಾಷ್ಟ್ರವೂ ಹಿಂದೆಂದೂ ಕಂಡಿರದ ಅತ್ಯಂತ ದುರ್ಬಲ ಪ್ರಧಾನಿ ಮನಮೋಹನ್ ಸಿಂಗ್ ಎಂದು ವ್ಯಾಖ್ಯಾನಿಸಿದ ಮೋದಿ, ಸಿಂಗ್ ಅವರನ್ನು ಒಬ್ಬ ಹೀರೋ ಎಂಬುದಾಗಿ ಬಿಂಬಿಸುತ್ತಿರುವುದೊಂದು ಅತಿದೊಡ್ಡ ವ್ಯಂಗ್ಯ ಎಂದು ಅವರು ಕಟಕಿಯಾಡಿದರು. ಮುಂಬೈ ದಾಳಿಯನ್ನು ಉದಾಹರಿಸಿದ ಅವರು ಮನಮೋಹನ್ ಸಿಂಗ್ ಆ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದೂ ಹೇಳಿದರು.
ಯುಪಿಎಯಲ್ಲಿ ಪ್ರಧಾನಿ ಹುದ್ದೆ ಕುರಿತು ಒಗ್ಗಟ್ಟಿಲ್ಲ, ಅಲ್ಲಿ ಹಲವು ಮಂದಿ ಪ್ರಧಾನಿ ಆಕಾಂಕ್ಷಿಗಳು ಇದ್ದಾರೆ ಎಂದು ಪೋಸ್ಟರ್‌ಬಾಯ್ ಮೋದಿ ಲೇವಡಿ ಮಾಡಿದರು.