"ಅದು ನೇಪಾಳವಿರಲಿ, ಪಾಕಿಸ್ತಾನವಿರಲಿ ಅಥವಾ ಶ್ರೀಲಂಕಾವಿರಲಿ, ಇಂದು ಅಲ್ಲಿನ ಶಾಂತಿ ಮತ್ತು ಸ್ಥಿರತೆಯ ಕೊರತೆಯು ನಮ್ಮ ರಾಷ್ಟ್ರದ ಭದ್ರತೆಯ ಮೇಲೆ ಪರಿಣಾಮ ಬೀರಲಿದೆ" ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕುರುಕ್ಷೇತ್ರಕ್ಕಿಂತ ಸುಮಾರು 30 ಕಿಲೋಮೀಟರ್ ದೂರದ ಪೊಹೋವಾ ಎಂಬಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಅವರು ನೇಪಾಳದಲ್ಲಿನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಭಾರತದ ನೆರೆರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆಯ ಕೊರತೆಯು ಅದರ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.
ನೆರೆಯ ನೇಪಾಳದಲ್ಲಿ ಪ್ರಧಾನಿ ಪ್ರಚಂಡ ಮುಖ್ಯಾಸೇನಾಧಿಕಾರಿಯರನ್ನು ವಜಾಗೊಳಿಸುವಲ್ಲಿಂದ ಆರಂಭಗೊಂಡ ಬಿಕ್ಕಟ್ಟು ಇನ್ನೂ ಮುಂದುವರಿದಿದೆ. ಪ್ರಧಾನಿಯವರ ಆದೇಶವು ಸಂವಿಧಾನ ಬಾಹಿರವಾದುದು ಎಂಬುದಾಗಿ ಅಧ್ಯಕ್ಷ ರಾಮ್ ಬರನ್ ಯಾದವ್ ಅವರು ನಿರ್ದೇಶನ ನೀಡಿ ಸೇನಾಧಿಕಾರಿಯ ವಜಾವನ್ನು ತಡೆದಿದ್ದರು. ಪ್ರಚಂಡ ಅವರ ನಿಲುವನ್ನು ಮಿತ್ರಪಕ್ಷಗಳು ಮತ್ತು ವಿರೋಧ ಪಕ್ಷಗಳು ವಿರೋಧಿಸಿದ್ದವು. ಈಎಲ್ಲ ಹಿನ್ನೆಲೆಯಲ್ಲಿ ಮಾವೋವಾದಿ ನಾಯಕ ಪ್ರಚಂಡ ತನ್ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲೀಗ ನೂತನ ಪ್ರಧಾನಿ ಆಯ್ಕೆಯ ಕಸರತ್ತು ನಡೆಯುತ್ತಿದೆ.