ನಾನು ಬಂಗಾರಪ್ಪ ಅವರ ರೀತಿ ಆರು ತಿಂಗಳಿಗೊಮ್ಮೆ ಬೇರೆ ಪಕ್ಷಕ್ಕೆ ಹೋಗಿ, ಆ ಪಕ್ಷವನ್ನು ಸರ್ವನಾಶ ಮಾಡಿ, ನಾಯಕರ ನಡುವೆ ವಿಷಬೀಜ ಬಿತ್ತಿ, ಮತ್ತೊಂದು ಪಕ್ಷಕ್ಕೆ ಹಾರುವ ಮರಕೋತಿ ರಾಜಕೀಯ ಮಾಡಿಲ್ಲ ಎಂದು ಭದ್ರಾವತಿ ಶಾಸಕ ಸಂಗಮೇಶ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಯಾವತ್ತಿಗೂ ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸ್ ವಿರೋಧಿ ಅಲ್ಲ. ಪಕ್ಷಾಂತರಿ ಹಾಗೂ ದುರಹಂಕಾರಿ ಬಂಗಾರಪ್ಪ ಅವರ ನಡವಳಿಕೆಯಿಂದ ಬೇಸತ್ತು ಚುನಾವಣೆ ಸಮಯದಲ್ಲಿ ತಟಸ್ಥನಾಗಿದೆ ಎಂದಿದ್ದಾರೆ. ನನ್ನನ್ನು ನೋಡಿಕೊಳ್ಳುತ್ತೇನೆ ಎಂದು ಪದೇ ಪದೇ ಹೇಳುತ್ತಿರುವ ಅವರು ಯಾರಿಗಾದರೂ ಸುಪಾರಿ ಕೊಟ್ಟಿದ್ದಾರಾ ಎಂದು ಸ್ಪಷ್ಟಪಡಿಸಬೇಕು ಎಂದರು.
ನನ್ನ ಕ್ಷೇತ್ರದ ಮತದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿರುವ ಬಂಗಾರಪ್ಪ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಪ್ಪು ಹಣ ನೀಡಿಲ್ಲ: 1999ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್‌ಗಾಗಿ ಬಂಗಾರಪ್ಪನವರಿಗೆ 50ಲಕ್ಷ ರೂ.ಕಪ್ಪು ಹಣ ನೀಡಿದ್ದೆ ಎಂದು ಹೇಳಿಕೆ ನೀಡಿದ್ದ ಸಂಗಮೇಶ್ ಇದೀಗ ಉಲ್ಟಾ ಹೊಡೆದಿದ್ದು, ನಾನು ಬಂಗಾರಪ್ಪಗೆ ನೀಡಿದ್ದು ಕಪ್ಪ ಹಣವಲ್ಲ. ನನ್ನ ತಂದೆಯವರು, ಬಂಧುಬಳಗ ನೀಡಿದ ಹಣ ಎಂದು ಸಮಜಾಯಿಷಿ ನೀಡಿದ್ದಾರೆ.