ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ರಾಹುಲ್ 'ಓಲೈಕೆ' ಯತ್ನ: ಎಡಪಕ್ಷ, ಲಾಲು, ಪಾಸ್ವಾನ್ ಕಿಡಿ
ಮತಸಮರ
ಲೋಕಸಭೆ ಮಹಾ ಸಮರದಲ್ಲಿ ಈ ಬಾರಿ ಅತಂತ್ರ ಸಂಸತ್ತು ರಚನೆಯಾಗುವುದು ಸ್ಪಷ್ಟವಾಗತೊಡಗಿರುವಂತೆಯೇ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಮೂಲಕ ಮಿತ್ರರಿಗಾಗಿ ಬಾಗಿಲು ತೆರೆಯಲಾರಂಭಿಸಿದ್ದು, ಮಾಜಿ ಮಿತ್ರರ ಕಣ್ಣು ಕುಕ್ಕಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಎಡಪಕ್ಷಗಳ ಬೆಂಬಲ ದೊರೆಯಲಿದೆ ಎಂದು ಹೇಳಿಕೆ ನೀಡಿರುವುದನ್ನು ಎಡರಂಗವು "ಕಾಂಗ್ರೆಸ್ ಹತಾಶೆಯ ಪರಮಾವಧಿ" ಎನ್ನುತ್ತಾ ತಳ್ಳಿ ಹಾಕಿದ್ದರೆ, ಜೆಡಿಯು ಮುಖಂಡ ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುರನ್ನು ರಾಹುಲ್ ಹೊಗಳಿರುವುದು, ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್-ರಾಮವಿಲಾಸ್ ಪಾಸ್ವಾನ್ ಕಣ್ಣು ಕೆರಳಿಸಿದೆ.

ಚುನಾವಣೋತ್ತರ ಕಾಲದಲ್ಲಿನ ಗೊಂದಲದ ಪರಿಸ್ಥಿತಿಯ ಸಾಧ್ಯತೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಂತ್ರವನ್ನು ಬಿಚ್ಚಿಡುತ್ತಾ ರಾಹುಲ್ ಗಾಂಧಿ ಅವರು ಮಂಗಳವಾರ ಪತ್ರಿಕಾಗೋಷ್ಠಿಯೊಂದರಲ್ಲಿ, ಕೆಲವೇ ಶತ್ರುಗಳಿರುತ್ತಾರೆ ಎಂಬರ್ಥದ ಹೇಳಿಕೆ ನೀಡಿದ್ದರು ಮತ್ತು ಮನಮೋಹನ್ ಸಿಂಗ್ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಸ್ಪಷ್ಟಪಡಿಸಿದ್ದರು. ಸಿಂಗ್‌ಗೆ ಎಡಪಕ್ಷಗಳು ಬೆಂಬಲ ನೀಡಲಿವೆ ಎಂದೂ ಅವರು ಹೇಳಿದ್ದರು.

ಆದರೆ ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಎಡಪಕ್ಷಗಳು, 'ಇದು ಕಾಂಗ್ರೆಸ್‌ನ ಆತ್ಮವಿಶ್ವಾಸದ ಕೊರತೆಯ ಪ್ರತೀಕ' ಎಂದು ಟೀಕಿಸಿವೆಯಲ್ಲದೆ, ಯುಪಿಎಗೆ ಸಾಕಷ್ಟು ಸಂಖ್ಯಾಬಲ ದೊರೆಯುವ ಬಗೆಗಿನ ಅಪನಂಬಿಕೆಯೇ ಈ ಹೇಳಿಕೆಗೆ ಕಾರಣ ಎಂದಿದೆ. "ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರಕಾರದ ಪರ ನಾವು" ಎಂದು ಸಿಪಿಎಂ ಪೊಲಿಟ್ ಬ್ಯುರೋ ಸದಸ್ಯ ಸೀತಾರಾಮ ಯೆಚೂರಿ ಖಚಿತವಾಗಿ ಪ್ರತಿಕ್ರಿಯಿಸಿದರು.

ಸಿಪಿಎಂ ನಾಯಕಿ ಬೃಂದಾ ಕರಾಟ್ ಕೂಡ ಇದೇ ರೀತಿ ಪ್ರತಿಕ್ರಿಯಿಸಿದ್ದು, ಇದು ಕಾಂಗ್ರೆಸಿನ ಆತ್ಮವಿಶ್ವಾಸದ ಕೊರತೆಯ ಪ್ರತೀಕ ಎಂದಿದ್ದಾರೆ. ಇನ್ನೊಂದೆಡೆ, ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ.ಬರ್ಧಾನ್ ಕೂಡ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್‌ನ ಹತಾಶೆಯ ಪ್ರತಿಬಿಂಬ ಎಂದಿದ್ದಾರೆ.

ಸಿಪಿಐ ಮುಖಂಡ ಡಿ. ರಾಜಾ "ಎಡಪಕ್ಷಗಳನ್ನು ಓಲೈಸಲು ಹೊರಟಿರುವ ರಾಹುಲ್ ಹೇಳಿಕೆಯು ಕಾಂಗ್ರೆಸ್ ಸೋಲೊಪ್ಪಿಕೊಂಡಿರುವುದರ ಸಂಕೇತ" ಎಂದೇ ಬಣ್ಣಿಸಿದ್ದಾರೆ.

ಮತ್ತೊಂದೆಡೆ ಎನ್‌ಡಿಎ ಪಾಲುದಾರ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಮತ್ತು ತೃತೀಯ ರಂಗದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂಗಳನ್ನೂ, ಆಯಾ ಮುಖಂಡರನ್ನು ಹೊಗಳುವ ಮೂಲಕ ಸೆಳೆದುಕೊಳ್ಳುವ ಪ್ರಯತ್ನ ಮಾಡಿರುವ ರಾಹುಲ್ ವಿರುದ್ಧ ಲಾಲೂ-ಪಾಸ್ವಾನ್ ಜೋಡಿ ಕಿಡಿ ಕಾರಿದ್ದಾರೆ.

ಸ್ಥಾನ ಹಂಚಿಕೆ ಬಗ್ಗೆ ಕಾಂಗ್ರೆಸಿನಿಂದ ದೂರವಾಗಿರುವ ಆರ್‌ಜೆಡಿ ಮತ್ತು ಎಲ್‌ಜೆಪಿ ಮುಖಂಡರು, ನಿತೀಶ್‌ರನ್ನು ರಾಹುಲ್ ಹೊಗಳಿರುವುದರಿಂದ ಮತ್ತಷ್ಟು ಕೆರಳಿ ಕೆಂಡವಾಗಿದ್ದಾರೆ. "ನಿತೀಶ್ ಅಷ್ಟು ಒಳ್ಳೆಯವರಾಗಿದ್ದರೆ, ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸಿದ್ದಾದರೂ ಏಕೆ" ಎಂದು ಎಲ್‌ಜೆಪಿ ಮುಖಂಡ ಪಾಸ್ವಾನ್ ಪ್ರಶ್ನಿಸಿದ್ದರೆ, ನಿತೀಶ್ ಏನೂ ಒಳ್ಳೆಯ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್ ನಮ್ಮೊಂದಿಗಿಲ್ಲ, ನಾವು ಕೂಡ ಅದರೊಂದಿಗಿಲ್ಲ ಎಂದು ಲಾಲು ಪ್ರತಿಕ್ರಿಯಿಸಿದ್ದಾರೆ.