ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಮತ ಹಾಕುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದ ಆಯುಷ್ ನಿರ್ದೇಶನಾಲಯದ ನಿರ್ದೇಶಕ ಡಾ.ಪ್ರಕಾಶ್ ಅವರು ಇಲಾಖಾ ತನಿಖೆಯ ಪ್ರಾಥಮಿಕ ವರದಿಯಲ್ಲಿ ನಿರ್ದೋಷಿ ಎಂದು ಬಿಂಬಿಸುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಪ್ರಕಾಶ್ ಹೆಸರಿನಲ್ಲಿ ನಿರ್ದೇಶನಾಲಯದ ಲೆಟರ್ ಹೆಡ್ ದುರುಪಯೋಗ ಮತ್ತು ಸಹಿ ಫೋರ್ಜರಿ ಮಾಡಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಬಲವಾದ ಅನುಮಾನ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಶ್ರೀನಿವಾಸಚಾರಿ ಅವರು ಪ್ರಕರಣದ ಬಗ್ಗೆ ಸಮಗ್ರ ವಿಚಾರಣೆ ನಡೆಸಿ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದು, ಪ್ರಕಾಶ್ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಏತನ್ಮಧ್ಯೆ ಆಯುಷ್ ನಿರ್ದೇಶಕ ಡಾ.ಪ್ರಕಾಶ್ ಪ್ರಕರಣದ ಸಂಬಂಧ ತಮ್ಮ ಸಹಿಯನ್ನು ಫೋರ್ಜರಿ ಮಾಡಿರುವುದಾಗಿ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆದರೆ ಈ ಪ್ರಕರಣ ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ್ದರಿಂದ ಚುನಾವಣಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳು ದೂರು ನೀಡಿದಲ್ಲಿ ಮಾತ್ರ ದಾಖಲಿಸಿಕೊಳ್ಳಲು ಸಾಧ್ಯ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.