ಸಿಂಗ್‌ರಂತೆ ನಾನ್ಯಾಕೆ ಹಿಂಬಾಗಿಲ ಪ್ರಧಾನಿಯಾಗಬಾರದು: ಮಾಯಾ
ಲಕ್ನೋ, ಬುಧವಾರ, 6 ಮೇ 2009( 18:00 IST )
ಇಂದಿನ ದಿನದಲ್ಲಿ ಎಲ್ಲರೂ ಪ್ರಧಾನಿಯಾಗ ಬಯಸುತ್ತಿದ್ದಾರೆ ಎಂಬುದಾಗಿ ಹೇಳಿರುವ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಎಸ್ಪಿ ವರಿಷ್ಠೆ, ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ, "ಮನಮೋಹನ್ ಸಿಂಗ್ ಅಂತಹವರನ್ನು ಸೋನಿಯಾಗಾಂಧಿ 'ಹಿಂಬಾಗಿಲ' ಮೂಲಕ ಸಂಸತ್ತಿಗೆ ಕರೆತಂದು ಅವರನ್ನು ಪ್ರಧಾನಿ ಮಾಡಬಹುದಾದರೆ, ಹಲವಾರು ಚುನಾವಣೆಗಳಲ್ಲಿ ಗೆದ್ದಿರುವ, ರಾಷ್ಟ್ರದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿಯಾಗಿರುವ ನನ್ನಂತಹ ಒಬ್ಬ ವಿದ್ಯಾವಂತ ದಲಿತ ಮಗಳು ಯಾಕೆ ಪ್ರಧಾನಿಯಾಗಬಾರದು" ಎಂಬುದಾಗಿ ಪ್ರಶ್ನಿಸಿದ್ದಾರೆ.
ಸೋನಿಯಾ ಗಾಂಧಿ ಚುನಾವಣಾ ರ‌್ಯಾಲಿಯ ತನ್ನ ಇತ್ತೀಚಿನ ಭಾಷಣ ಒಂದರಲ್ಲಿ ಪ್ರಧಾನಿ ಆಕಾಂಕ್ಷಿಗಳ ಕುರಿತು ವ್ಯಂಗ್ಯವಾಡಿದ್ದರು. "ಪ್ರತಿಯೊಬ್ಬರು ಪ್ರಧಾನಿಯಾಗ ಬಯಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಶನ್ ಆಗುತ್ತಿದೆ" ಎಂದು ಸೋನಿಯಾ ಹೇಳಿದ್ದರು.
ಆಗ್ರಾದಲ್ಲಿ ಬೃಹತ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾ, ತನ್ನದೇ ಶೈಲಿಯಲ್ಲಿ ಸೋನಿಯಾ ವಿರುದ್ಧ ಆಕ್ರಮಣ ನಡೆಸಿದರು. ಪ್ರಧಾನಿಯಾಗಲು ತಾನು ಇತರೆಲ್ಲರಿಗಿಂತ ಹೆಚ್ಚು ಸೂಕ್ತ ಎಂದ ಅವರು ಬಿಎಸ್ಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಜನರನ್ನು ಹುರಿದುಂಬಿಸಿದರು.
ಸಾಮಾನ್ಯವಾಗಿ ಭಾಷಣಗಳನ್ನು ಓದುವ ಮಾಯಾವತಿ, ಸೋನಿಯಾ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಮತ್ತು ಪ್ರಧಾನಿ ಸ್ಥಾನದ ಕುರಿತು ಮಾತನ್ನಾಡುವ ವೇಳೆ ಮಾತ್ರ ಸಮಯಸ್ಫೂರ್ತಿಯಂತೆ ಆಶುಭಾಷಣ ಮಾಡುತ್ತಾ ಸೋನಿಯಾರನ್ನ ತರಾಟೆಗೆ ತೆಗೆದುಕೊಂಡರು.
ಮನಮೋಹನ್ ಸಿಂಗ್ ಅವರು ಚುನಾವಣೆಯಲ್ಲಿ ಸ್ಫರ್ಧಿಸಿಲ್ಲ. ಅವರನ್ನು ರಾಜ್ಯಸಭೆಯ ಹಿಂಬಾಗಿಲ ಮೂಲಕ ಕರೆತಂದು ಪ್ರಧಾನಿ ಮಾಡಲಾಯಿತು. ಮನಮೋಹನ್ ಸಿಂಗ್ ಪ್ರಧಾನಿಯಾಗ ಬಹುದಾದರೆ ಒಬ್ಬ ದಲಿತಮಹಿಳೆ ಯಾಕೆ ಪ್ರಧಾನಿಯಾಗಬಾರದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಪ್ರಶ್ನಿಸಿದರು.
ಇದಲ್ಲದೆ ಅವರು ಪ್ರಾಂತೀಯ ಭಾವನೆಗಳನ್ನು ಕೆರಳಿಸಲೂ ಪ್ರಯತ್ನಿಸಿದರು. ಆಡ್ವಾಣಿ ಅವರು ಗುಜರಾತಿನಿಂದ ಬಂದು ಪ್ರಧಾನಿ ಸ್ಥಾನಕ್ಕೆಕಾಯುತ್ತಿದ್ದಾರೆ. ಕಾಂಗ್ರೆಸ್ ಪಂಜಾಬಿನ ಮನಮೋಹನ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿಸಿದೆ. ಹೀಗಿರುವಾಗ ಉತ್ತರ ಪ್ರದೇಶವು ತನ್ನ ಒಬ್ಬ ಅಭ್ಯರ್ಥಿಯನ್ನು ಯಾಕೆ ಪ್ರಧಾನಿಯಾಗಿಸಬಾರದು ಎಂಬುದಾಗಿ ನೆರೆದಿದ್ದ ಅಪಾರ ಜನಸ್ತೋಮವನ್ನು ಪ್ರಶ್ನಿಸಿದರು.