ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ನಂದಿಗ್ರಾಮ ಗಲಭೆ: ಪ.ಬಂಗಾಳದಲ್ಲಿ ಈ ಬಾರಿಯೂ ಸಿಪಿಎಂಗೆ ಕಹಿಯೇ?
ಮತಸಮರ
PTI
ನಂದಿಗ್ರಾಮ ಗಲಭೆಯಿಂದಾಗಿಯೇ ಎಡಪಕ್ಷಗಳ ವಿರುದ್ಧ ಭಾರೀ ಗೆಲುವಿನ ನಗೆ ಬೀರಿದ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ಇದೀಗ ಮತ್ತೆ ಎಡಪಕ್ಷಗಳ ನಿದ್ದೆಗೆಡಿಸಿದ್ದಾರೆ. ಸಿಪಿಎಂನ ಒಳಗಿನ ಹಲವರಲ್ಲಿ ಒಡಕು ಮೂಡಿದ್ದು, ಚುನಾವಣೆಯಲ್ಲಿ ಪಳಗಿದ ಹುಲಿಗಳನ್ನೇ ಸೆಳೆದಿರುವ ಮಮತಾ, ಚುನಾವಣೆಯಲ್ಲಿ ಅವರ ಮೂಲಕವೇ ಸಿಪಿಐಂನನ್ನು ಅಲುಗಾಡಿಸಲು ಹೊರಟಿದ್ದಾರೆ.

2007ರ ಮಾರ್ಚ್ 14ರ ನಂತರ ಸ್ಥಳೀಯ ಪಂಚಾಯತ್‌ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೆ ಪ್ರತಿಯೊಂದರಲ್ಲೂ ಆಡಳಿತರೂಢ ಮಾರ್ಕ್ಸ್‌ವಾದಿಗಳು ಭಾರೀ ಬೆಲೆಯ್ನೇ ತೆರಬೇಕಾಯ್ತು. ತೃಣಮೂಲವೇ ಎಲ್ಲದರಲ್ಲೂ ವಿಜ್ರಂಭಿಸಿತು. ಈ ಬಾರಿಯೂ ಎಡಪಕ್ಷಗಳು ಭಾರೀ ಚಿಂತೆಯಲ್ಲಿವೆ. ಲೋಕಸಭಾ ಚುನಾವಣೆಯಲ್ಲಿ ಈ ನಂದಿಗ್ರಾಮ ವಿಷಯವೇ ಮೇಳೈಸಿದರೆ ನಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದೇ ಈ ಚಿಂತೆಗೆ ಕಾರಣ. ಅಲ್ಲದೆ ನಂದಿಗ್ರಾಮವಿರುವ ತಾಮಲುಕ್ ಲೋಕಸಭಾ ಸ್ಥಾನದಲ್ಲಿ ಸಿಪಿಐಂನ ದುರೀಣ ಲಕ್ಷ್ಮಣ ಸೇಥ್ ಸ್ಪರ್ಧಿಸುತ್ತಿದ್ದಾರೆ.

ಸಿಪಿಎಂನ ನಿದ್ದೆಗೆಡುವುದಕ್ಕೆ ಕೇವಲ ಇಷ್ಟೇ ಕಾರಣವಲ್ಲ. ಬೇರುಮಟ್ಟದಲ್ಲಿ ಸಿಪಿಎಂನ ಹಲವು ಪರಿಣತರೊಂದಿ ತೃಣಮೂಲ ಕಾಂಗ್ರೆಸ್‌ನ್ನು ಭದ್ರಪಡಿಸುವ ಕಾಯಕವನ್ನು ಮಮತಾ ಮಾಡುತ್ತಿದ್ದಾರೆ. ಸಿಪಿಎಂನ 42 ಮಂದಿಯ ಸಮಿತಿಯಲ್ಲಿ ಇದೀಗ 35 ಮಂದಿ ತೃಣಮೂಲದೊಂದಿಗೆ ಸಂಬಂಧ ಹೊಂದಿದ್ದಾರೆ. ನಂದಿಗ್ರಾಮದ 834 ಸಿಪಿಎಂ ಕಾರ್ಡ್‌ ಹೋಲ್ಡರ್‌ಗಳ ಪೈಕಿ ಹಲವರು ಕೆಲಸವೇ ಮಾಡುತ್ತಿಲ್ಲವಾದರೆ, ಉಳಿದವರು ಸಿಪಿಎಂ ತ್ಯಜಿಸಿ ತೃಣಮೂಲ ಕಾಂಗ್ರೆಸ್ ಒಳಹೊಕ್ಕಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳದ ದಕ್ಷಿಣದ ಆರು ಜಿಲ್ಲೆಗಳಲ್ಲಿ ಸಿಪಿಎಂನ ತಳಮಟ್ಟದ ಕಾರ್ಯಕರ್ತರು ಕೆಲಸವೇ ಮಾಡುತ್ತಿಲ್ಲ ಎನ್ನುತ್ತವೆ ಸಿಪಿಎಂನ ಮೂಲಗಳು.

ನಂದಿಗ್ರಾಮದ ಸಿಪಿಎಂನ ಕಾರ್ಯಕರ್ತರು ಈಗ ತೃಣಮೂಲ ಸೇರಿದ್ದು, ಗ್ರಾಮಪಂಚಾಯತ್‌ನ್ನು ನಡೆಸುತ್ತಿದ್ದಾರೆ. ಆದರೂ ಸಿಪಿಎಂನ ನೇತಾರರೊಬ್ಬರು ನಮಗೆ ಮತ ಸಿಗಲಿಲ್ಲ, ಅಥವಾ ಮತಗಳ ಇಳಿಕೆಯಾದರೆ ಬೇಸರವಿಲ್ಲ. ಬದಲಾಗಿ ನಮ್ಮ ರ್ಯಾಂಕ್ ಕೈತಪ್ಪಿದರೆ ಎಂಬ ಭಯವಿದೆ ಅಷ್ಟೆ ಎನ್ನುತ್ತಾರೆ. ಅಲ್ಲದೆ, 26,000 ಸಿಪಿಎಂ ಬ್ರ್ಯಾಂಚ್‌ಗಳಲ್ಲಿ ಕಾರ್ಯ ನಿರ್ವಹಿಸದೆ ಇರುವ ಬ್ರ್ಯಾಂಚ್‌ಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಾರಣವನ್ನೂ ಸಿಪಿಎಂ ಹೀಗೆ ನೀಡುತ್ತದೆ.

ಸಿಪಿಎಂನ ವಿಭಾಗೀಯ ಸಮಿತಿ ಸದಸ್ಯರಾಗಿದ್ದ ನಿಶಿಕಾಂತ ಮಂಡಲ್ ಇದೀಗ ತೃಣಮೂಲ ಕಾಂಗ್ರೆಸ್‌ನಲ್ಲಿದ್ದು ಸೋನಪುರ ಹಳ್ಳಿಯ ಪಂಚಾಯತ್ ನಿರ್ವಹಿಸುತ್ತಿದ್ದಾರೆ. ಸಿಪಿಎಂನ ಸ್ಥಳೀಯ ಸದಸ್ಯರಾಗಿದ್ದ ಶೇಕ್ ಶಹಬುದ್ದೀನ್ ಕೆಂಡಮರಿ ತೃಣಮೂಲದಲ್ಲಿದ್ದುಕೊಂಡು ಹಳ್ಳಿಯ ಪಂಚಾಯತ್‌ನ್ನು ನೋಡಿಕೊಂಡಿದ್ದಾರೆ. ನಂದಿಗ್ರಾಮದ ಎಲ್ಲ 10 ಗ್ರಾಮ ಪಂಚಾಯತ್‌ಗಳು ಈಗ ಸಿಪಿಎಂ ತೊರೆದು ತೃಣಮೂಲ ಸೇರಿದ ಮಂದಿಯ ಕೈಯಲ್ಲಿವೆ. ಅರ್ಥಾತ್ ತೃಣಮೂಲ ಕಾಂಗ್ರೆಸ್ ಬಳಿಯಿದೆ. ಈ ನಾಯಕರ ನಿರ್ಗಮನದಿಂದ ಅವರ ಬೆಂಬಲಿಗರೂ ತೃಣಮೂಲಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ತಳಮಟ್ಟದಿಂದಲೇ ಸಿಪಿಎಂ ಅಲುಗಾಡಿದೆ.

ನಂದಿಗ್ರಾಮದಲ್ಲಿ ಸಿಪಿಎಂ ವಿರೋಧಿ ಅಲೆ ಹುಟ್ಟಿರುವಕಾರಣಕ್ಕಾಗಿ ಸಿಪಿಎಂ ತನ್ನ 834 ಕಾರ್ಡ್ ಹೋಲ್ಡರ್‌ಗಳ ಪೈಕಿ 90 ಮಂದಿಯನ್ನು ಪಕ್ಷದಿಂದ ಉಚ್ಛಾಟಿಸಲು ನಿರ್ಧರಿಸಿದೆ. ಅಲ್ಲದೆ ನಂದಿಗ್ರಾಮದಲ್ಲಿ ಸಿಪಿಎಂನ ಆರು ವಿಭಾಗೀಯ ಸಮಿತಿಗಳು ಹಾಗೂ 76 ಶಾಖಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಈಗ ಒಂದೇ ಒಂದು ಸಿಪಿಎಂ ಶಾಖೆಯೂ ಕಾರ್ಯ ನಿರ್ವಹಿಸುತ್ತಿಲ್ಲ. ಇಷ್ಟೇ ಅಲ್ಲ. ಈ ಬಾರಿಯ ಲೋಕಸಬಾ ಚುನಾವಣೆಗೆ ಕಡಿಮೆ ಅಂದರೂ 52 ಮತಗಟ್ಟೆಗಳಿಗ ಸಿಪಿಎಂ ಕೈಯಲ್ಲಿ ಪಕ್ಷದ ಚುನಾವಣಾ ಏಜೆಂಟ್ ಯಾರೂ ಇಲ್ಲ. ಇವೆಲ್ಲವೂ ಸಿಪಿಎಂ ಪಾಲಿಗೆ ದೊಡ್ಡ ಶಾಕ್.

ತಾಮಲುಕ್ ಲೋಕಸಭಾ ಕ್ಷೇತ್ರದಲ್ಲಿ ಕೇವಲ ನಂದಿಗ್ರಾಮ ಮಾತ್ರವಲ್ಲ, ಮಹಿಸದಳ್ ಪ್ರದೇಶದಲ್ಲೂ ನಂದಿಗ್ರಾಮದಂತಹುದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಸದಳದ 223 ಗ್ರಾಮ ಪಂಚಾಯತಿಗಳ ಪೈಕಿ 181 ಸೀಟುಗಳನ್ನು ತೃಣಮೂಲ ಗೆದ್ದಿದೆ.

ಇವೆಲ್ಲ ಬೆಳವಣಿಗೆಗಳಿಂದ ಸಿಪಿಎಂ ಧುರೀಣ ಲಕ್ಷ್ಮಣ ಸೇಥ್‌ಗೆ ಜಯದ ಮೆಟ್ಟಿಲು ಅಷ್ಟು ಸುಲಭವಲ್ಲ. ಆದರೂ ತೃಣಮೂಲ ಕಾಂಗ್ರೆಸ್ ಗೆದ್ದಿದೆ ಅಂದುಕೊಳ್ಳಬೇಕಾಗೂ ಇಲ್ಲ. ಯಾಕೆಂದರೆ ಈ ಮೊದಲು ಸೇಥ್ ಇದೇ ಕ್ಷೇತ್ರದಿಂದ ಮೂರು ಬಾರಿ ವಿಜಯ ಸಾಧಿಸಿದ್ದರು. ಜತೆಗೆ ಈ ಬಾರಿ ಮೊದಲೇ ಪರಿಸ್ಥಿತಿಯ ಅರಿವಿರುವ ಸೇಥ್ ಮನೆಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಕೈಗಾರಿಕೋದ್ಯಮ ಸಾಮಾನ್ಯ ಜನರ ಜೀವನವನ್ನು ಬದಲಿಸುವ ಶಕ್ತಿ ಹೊಂದಿದೆ ಎಂದು ಜನರ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಸೇಥ್ ಹೇಳಿದ್ದಾರೆ.