ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಜನಸಾಮಾನ್ಯರು ಯಾವರೀತಿ ಪರದಾಡಬೇಕಾಗುತ್ತದೆ ಎಂಬ ಪರಿಸ್ಥಿತಿಯನ್ನು ಗುರುವಾರ ಸ್ವತಹ ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ಎದುರಿಸಿರುವ ಘಟನೆ ಸಂಭವಿಸಿದೆ.
ಚಾವ್ಲಾ ಅವರ ಹೆಸರನ್ನು ನಿರ್ಮಾಣ್ ಭವನ ಮತಕೇಂದ್ರದ 85ನೆ ಮತಗಟ್ಟೆಯಲ್ಲಿ ನೋಂದಣಿಯಾಗಿತ್ತು. ಆದರೆ ಅವರು ಮತ ಚಲಾಯಿಸಲು ತೆರಳಿದ ವೇಳೆಗೆ ಅವರ ಹೆಸರು ಪಟ್ಟಿಯಿಂದ ತೆಗೆದು ಹಾಕಿರುವುದು ಕಂಡು ಬಂತು.
ಕಳೆದ ತಿಂಗಳಲ್ಲಿ ಮುಖ್ಯಚುನಾವಣಾಧಿಕಾರಿಯಾಗಿ ನೇಮಕಗೊಂಡ ಬಳಿಕ ಅವರು ತಮ್ಮ ನಿವಾಸವನ್ನು ಬದಲಿಸಿರುವ ಹಿನ್ನೆಲೆಯಲ್ಲಿ ಅವರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಸಂಬಂಧಿತ ಮತಗಟ್ಟೆಯ ಅಧಿಕಾರಿ ತಿಳಿಸಿದ್ದಾರೆ.
ಆದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣೆಯ ನಿಯಂತ್ರಣ ಹೊಂದಿರುವ ಚಾವ್ಲಾ ಅವರ ಹೆಸರು ಅವರು ಪ್ರಸಕ್ತ ವಾಸ್ತವ್ಯ ಹೊಂದಿರುವ ನಿವಾಸಿಗಳ ಪ್ರದೇಶದ ಮತದಾರರ ಪಟ್ಟಿಯಲ್ಲಿ ಸೇರಿತ್ತು.