ಕಾಂಗ್ರೆಸ್ ಪಕ್ಷವು ಜೆಡಿಯು ಮತ್ತು ಎಐಎಡಿಎಂಕೆ ಪಕ್ಷಗಳೊಂದಿಗೆ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂಬ ಸುಳಿವನ್ನು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ನೀಡಿದ್ದಾರೆ.
ಅವರು (ನಿತೀಶ್ ಕುಮಾರ್) ಅವರು ಬಿಹಾರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇದನ್ನು ಎಲ್ಲರೂ ಹೇಳುತ್ತಿದ್ದಾರೆ. ಅವರು ಜನಪರ ಹಾಗೂ ಅಭಿವೃದ್ಧಿಪರವಾಗಿದ್ದಾರೆ ಎಂದು ಶೀಲಾ ನಾಲ್ಕನೆ ಹಂತದ ಚುನಾವಣೆ ಪ್ರಕ್ರಿಯೆ ವೇಳೆ ಹೇಳಿದ್ದಾರೆ. ಕೊನೆಯ ಹಾಗೂ ಅಂತಿಮ ಹಂತದ ಚುನಾವಣೆ ಮೇ.13ರಂದು ನಡೆಯಲಿದ್ದು, ಮೇ16ರಂದು ಮತಎಣಿಕೆ ನಡೆಯಲಿದೆ.
ಎಐಎಡಿಎಂಕೆಯೊಂದಿಗೆ ಚುನಾವಣೆ ಬಳಿಕ ಮೈತ್ರಿ ಮಾಡಿಕೊಳ್ಳಲಿದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದು ಕಾಂಗ್ರೆಸ್ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬುದರ ಮೇಲೆ ಅವಲಂಭಿಸಿದೆ ಎಂದು ಹೇಳಿದರು. ಇದಲ್ಲದೆ, ಕೋಮುವಾದಿಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಆಯ್ಕೆಗಳು ಮುಕ್ತವಾಗಿವೆ ಎಂದು ಅವರು ನುಡಿದರು.
ಎಐಎಡಿಎಂಕೆಯೊಂದಿಗೆ ಚುನಾವಣೆ ಬಳಿಕ ಮೈತ್ರಿ ಸಾಧ್ಯವೇ ಎಂಬ ನೇರಪ್ರಶ್ನೆ ಎಸೆಯುವ ಮೂಲಕ ಪತ್ರಕರ್ತರು ಮತ್ತೆ ಕೆದಕಿದಾಗ ಅವರು ಹೌದೆಂದರು.
ಬಿಹಾರದ ನಿತೀಶ್ ಕುಮಾರ್ ಹಾಗೂ ಆಂಧ್ರದ ಚಂದ್ರಬಾಬು ನಾಯ್ಡು ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರ ಹಾಡಿ ಹೊಗಳಿರುವ ಬೆನ್ನಿಗೆ ಶೀಲಾ ಅವರ ಈ ಹೇಳಿಕೆ ಹೊರಬಿದ್ದಿದೆ.
ಕಾಂಗ್ರೆಸ್ ಎಡಪಕ್ಷಗಳೊಂದಿಗೆ ಮತ್ತೆ ದಾಂಪತ್ಯಕ್ಕೆ ಸಿದ್ಧ ಎಂಬುದಾಗಿಯೂ ರಾಹುಲ್ ಹೇಳಿದ್ದರು.