ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ರಾತ್ರಿ ನವದೆಹಲಿಯಲ್ಲಿ ಕರೆದಿರುವ ಸಂಪುಟ ಸಭೆಗೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಗೈರು ಹಾಜರಾಗಲಿದ್ದಾರೆ ಎಂಬ ಊಹೆಗಳು ದಟ್ಟವಾಗಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಲಾಲೂ ಅವರ ಕಡು ವೈರಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒಲಿಸಿಕೊಳ್ಳಲು ಮುಂದಾಗಿರುವುದು ಲಾಲೂರಲ್ಲಿ ಕೋಪ ತರಿಸಿದ್ದು, ಅವರು ಸಭೆಯಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಮಾಧ್ಯಮ ಸ್ನೇಹಿಯಾಗಿರುವ ಲಾಲೂ ಪ್ರಸಾದ್ ಯಾವದನ್ ಅವರು ಗುರವಾರದ ಬಿಹಾರದಲ್ಲಿ ಚುನಾವಣೆ ನಡೆಯುತ್ತಿರುವ ವೇಳೆ ಪತ್ರಕರ್ತರತ್ತ ಮುಖ ತಿರುವಿ ಸೀದಾ ನಡೆದರು. ವಿಷಣ್ಣವಾಗಿ ಕಾಣುತ್ತಿದ್ದ ಲಾಲೂ ತನ್ನ ಪತ್ನಿ ರಾಬ್ರಿದೇವಿ ಪುತ್ರ ಹಾಗೂ ಪುತ್ರಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ವೇಳೆ ಪತ್ರಕರ್ತರನ್ನು ಕ್ಯಾರೇ ಅನ್ನಲ್ಲಿಲ್ಲ. ಲಾಲೂ ಮತದಾನಕ್ಕೆ ಬರುತ್ತಾರೆ ಎಂದು ಬೆಳಗ್ಗಿನಿಂದ ಕಾಯುತ್ತಿದ್ದ ಪತ್ರಕರ್ತರು ಬಂದ ದಾರಿಗೆ ಸುಂಕವಿಲ್ಲ ಎನ್ನಬೇಕಾಯಿತು.
ಇದಲ್ಲದೆ, ಚಿತ್ರೀಕರಣದಲ್ಲಿ ತೊಡಗಿದ್ದ ಕೆಲವು ಸುದ್ದಿವಾಹಿನಿಗಳ ಕ್ಯಾಮರಾಮೆನ್‌ಗಳು ಮತ್ತು ಸುದ್ದಿಗಾರರನ್ನು ದೂಡಿದರು. ಮತಗಟ್ಟೆಯೊಳಗೆ ನುಸುಳುವಲ್ಲಿ ಸಫಲವಾಗಿದ್ದ ಕ್ಯಾಮಾರಾ ಮೆನ್ ಒಬ್ಬ ಹೊರತೆರಳಲು ನಿರಾಕರಿಸಿದಾಗ ಆತನನ್ನು ಭದ್ರತಾ ಸಿಬ್ಬಂದಿಗಳ ಮೂಲಕ ಬಲವಂತದಲ್ಲಿ ಹೊರಹಾಕಿಸಿದರು.