ಪ್ರಸಕ್ತ ಪರಿಸ್ಥಿತಿಯಲ್ಲಿ ಅತ್ಯಂತ ಬೇಕಾಗಿರುವ ರಾಜಕಾರಣಿಯಾಗಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನ್ನ ಆಹ್ವಾನಕ್ಕೆ ಕ್ಯಾರೇ ಅನ್ನದಿರುವುದು ಕಾಂಗ್ರೆಸ್‌ಗೆ ಸಿಟ್ಟು ತರಿಸಿದ್ದು "ನಿತೀಶ್ ತನ್ನನ್ನು ತಾನು 'ಮಹಾ' ಎಂದು ತಿಳ್ಕೊಂಡಿದ್ದಾರೆ" ಎಂದು ತೆಗಳಿದೆ. ಗುರವಾರವಷ್ಟೆ ನಿತೀಶ್ ಒಬ್ಬ ಉತ್ತಮ ವ್ಯಕ್ತಿ ಎಂದು ಕಾಂಗ್ರೆಸ್ ಹಾಡಿ ಹೊಗಳಿತ್ತು.
"ನಿತೀಶ್ ತನ್ನನ್ನು ತಾನು ಮಹಾ ಎಂದು ತಿಳಿದುಕೊಂಡಿದ್ದಾರೆ. ಅವರು ಬಿಜೆಪಿಯೊಂದಿಗೆ ಉಳಿಯುವುದಕ್ಕೆ ಪಶ್ಚಾತ್ತಾಪ ಪಡಲಿದ್ದಾರೆ" ಎಂದು ಕಾಂಗ್ರೆಸ್ ವಕ್ತಾರ ವೀರಪ್ಪ ಮೊಯ್ಲಿ ಹೇಳಿದ್ದರು. ನಿತೀಶ್ ಅವರನ್ನು ಹಾಡಿಹೊಗಳಿದ್ದ ಕಾಂಗ್ರೆಸ್ ಅವರಿಗೆ ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೇರಲು ಚುನಾವಣೋತ್ತರವಾಗಿ ಸ್ವಾಗತವಿದೆ ಎಂದು ಹೇಳಿತ್ತು. ಆದರೆ ನಿತೀಶ್ ಕುಮಾರ್ ತಾನು ಬಿಜೆಪಿಯ ಎನ್‌ಡಿಎ ಮೈತ್ರಿಕೂಟದೊಂದಿಗೆ ಇದ್ದು ಅದರೊಂದಿಗೆ ಮುಂದುವರಿಯುವುದಾಗಿ ಹೇಳಿದ್ದಾರೆ.
ಈಮಧ್ಯೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಾದ ಆರ್‌ಜೆಡಿ ಮತ್ತು ಎಲ್‌ಜೆಪಿಗಳೊಂದಿಗಿನ ವಾಗ್ಯುದ್ಧ ಶುಕ್ರವಾರ ತಾರಕಕ್ಕೇರಿದೆ. ತಮ್ಮ ಮಿತ್ರರು ಸೀಟು ಹಂಚಿಕೆ ಮಾಡುವಾಗ ಒಂದು ರಾಷ್ಟ್ರೀಯ ಪಕ್ಷವಾದ ತಮಗೆ ಕೇವಲ ಮೂರು ಸ್ಥಾನ ನೀಡಿ ಅವಮಾನ ಮಾಡಿದ್ದಾರೆ ಎಂಬುದಾಗಿ ಕಾಂಗ್ರೆಸ್ ವಕ್ತಾರ ವೀರಪ್ಪ ಮೊಯ್ಲಿ ದೂರಿದ್ದಾರೆ.
"ನಾವು ಹೆಚ್ಚು ಕೋಪಗೊಳ್ಳಬೇಕು. ಅವರಿಗೆ ನಾವೇನು ತಪ್ಪುಮಾಡಿಲ್ಲ. ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಅವರುಗಳು ಏನುಮಾಡಿದ್ದಾರೆ ಎಂಬುದು ಅವರಿಗೇ ಚೆನ್ನಾಗಿ ಗೊತ್ತು. ನಮಗೆ ಬರಿ ಮೂರು ಸೀಟು ಬಿಟ್ಟಿದ್ದಾರೆ. ಕಾಂಗ್ರೆಸ್‌ನಂತಹ ರಾಷ್ಟ್ರೀಯ ಪಕ್ಷ ಒಂದು ಇಂತಹ ಅವಮಾನವನ್ನು ಸಹಿಸಿಕೊಳ್ಳದು" ಎಂದು ಮೊಯ್ಲಿ ದೂರಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿರುವುದರಿಂದ ಈ ಇಬ್ಬರು ನಾಯಕರು ಮುನಿಸಿಕೊಂಡಿದ್ದಾರೆ. ನಾವಿನ್ನೂ ಯುಪಿಎ ಜತೆಗಿದ್ದೇವೆ ಆದರೆ ಲಾಲೂ ಮತ್ತು ಪಾಸ್ವಾನ್ ಅವರುಗಳು ತಾವು ಇನ್ನೂ ಯುಪಿಎ ಜತೆಗೆ ಇರುವುದಾಗಿ ಹೇಳಿದ್ದಾರೆ. ಕೋಲ್ಕತಾದಲ್ಲಿ ಚುನಾವಣಾ ಸಭೆ ಈ ಹಿಂದೆಯೇ ನಿಗದಿಯಾಗಿರುವ ಕಾರಣ ತಾನು ಸಂಪುಟ ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಪಾಸ್ವಾನ್ ಹೇಳಿದ್ದಾರೆ. (ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ರಾತ್ರಿ ಸಂಪುಟ ಸಭೆ ಕರೆದಿದ್ದಾರೆ)