ಬಿಜೆಪಿಯ ಪೋಸ್ಟರ್ ಬಾಯ್ ಆಗಿ ನಿರೂಪಣೆಗೊಳ್ಳುತ್ತಿರುವ ತರುಣ ನಾಯಕ ವರುಣ್ ಗಾಂಧಿ ವಿರುದ್ಧ ಹೇರಲಾಗಿರುವ ಎನ್ಎಸ್ಎ ಕಾಯ್ದೆ ಹಿಂತೆಗೆತ ಸಲಹೆಯನ್ನು ಸ್ವಾಗತಿಸಿರುವ ಬಿಜೆಪಿಯು, ಅಲಹಾಬಾದ್ ಹೈಕೋರ್ಟ್ ಸಲಹಾ ಮಂಡಳಿಯ ಈ ನಿರ್ಧಾರವು ಯುಪಿಎ ಸರ್ಕಾರ ಮತ್ತು ಅದರ ಮತಬ್ಯಾಂಕ್ ರಾಜಕೀಯವನ್ನು ಹರಾಜು ಹಾಕಿದಂತಾಗಿದೆ ಎಂದು ಹೇಳಿದೆ.
ವರುಣ್ ಗಾಂಧಿವಿರುದ್ಧ ಎನ್ಎಸ್ಎ ಕಾಯ್ದೆ ಹೇರಿರುವುದು ಮತಬ್ಯಾಂಕ್ ರಾಜಕೀಯಕ್ಕಾಗಿ ಹೂಡಿರುವ ಸಂಚು, ಅಲ್ಲದೆ ಆತನ ವಿರುದ್ಧ ತನಿಖೆಯನ್ನೂ ನಡೆಸದೆ ಕೇಂದ್ರ ಸರ್ಕಾರವು ಆತನ ವಿರುದ್ಧ ಎನ್ಎಸ್ಎ ಹೇರಲು ಬಯಸಿತ್ತು ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಪಿಟಿಐ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.
ಎನ್‌ಎಸ್ಎ ಹಿಂತೆಗೆಯುವಂತೆ ಸಮಿತಿಯು ಶಿಫಾರಸ್ಸು ಮಾಡಿರುವುದು ಕೇಂದ್ರದ ನಿಲುವನ್ನು ಬಹಿರಂಗ ಪಡಿಸಿದೆ ಎಂದು ಅವರು ನುಡಿದರು.
"ಕೇಂದ್ರ ಸರ್ಕಾರವು ಬೋಫೋರ್ಸ್ ಹಗರಣದ ಪ್ರಮುಖ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಮುಕ್ತವಾಗಿಸಲು ತರಾತುರಿ ತೋರಿದೆ, ಸಂಸತ್ತಿನ ಮೇಲೆ ದಾಳಿ ನಡೆಸಿರುವ ಉಗ್ರನ ಬಗ್ಗೆ ಮೆದು ಧೋರಣೆ ತಾಳಿದೆ. ಆದರೆ ವರುಣ್‌ನನ್ನು ಗಲ್ಲಿಗೇರಿಸಲು ಯತ್ನಿಸುತ್ತಿದೆ" ಎಂದು ಅವರು ವ್ಯಂಗ್ಯವಾಡಿದರು.
ಈ ಸಂಪೂರ್ಣ ಪ್ರಕರಣದಲ್ಲಿ ಮಾಯಾವತಿ ಸರ್ಕಾರ ವಹಿಸಿದ್ದ ಪಾತ್ರವೂ ಕೇಂದ್ರ ಸರ್ಕಾರದ ಪಾತ್ರಕ್ಕಿಂತ ಭಿನ್ನವಾಗಿರಲಿಲ್ಲ ಎಂದು ದೂರಲು ಬಿಜೆಪಿ ನಾಯಕ ಮರೆಯಲಿಲ್ಲ. ಯುಪಿ ಮತ್ತು ಯುಪಿಎ ಸರ್ಕಾರಗಳು ಒಂದೇ ತೆರನಾದ ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಜಾವಡೇಕರ್ ಆರೋಪಿಸಿದರು.