ಯುಪಿಎ ಮೈತ್ರಿ ಕೂಟದ ಮಿತ್ರರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಟೀಕಾಪ್ರಹಾರ ಮಾಡಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಅವರನ್ನು ಮಾಧ್ಯಮ ವ್ಯವಹಾರಗಳ ಮುಖ್ಯಸ್ಥ ಸ್ಥಾನದಿಂದ ಹೈಕಮಾಂಡ್ ತೆರವುಗೊಳಿಸಿ ರಜೆಯ ಮೇಲೆ ತೆರಳುವಂತೆ ಸೂಚಿಸಿದೆ.
ಯುಪಿಎ ಮೈತ್ರಿಕೂಟಕ್ಕೆ ಕಾಂಗ್ರೆಸ್ ನೀಡಿರುವ ಆಹ್ವಾನಕ್ಕೆ ನಿತೀಶ್ ನಕಾರ ಸೂಚಿಸಿರುವುದಕ್ಕೆ ಟೀಕಿಸಿದ್ದ ಮೊಯ್ಲಿ, "ಬಿಜೆಪಿ ಜತೆಗಿರುವ ನಿತೀಶ್ ಇದಕ್ಕ ಭಾರೀಯಾದ ಬೆಲೆತೆರಲಿದ್ದಾರೆ. ನಿತೀಶ್ ತನ್ನನ್ನು ತಾನು ಮಹಾ ಎಂದು ತಿಳಿದುಕೊಂಡಿದ್ದಾರೆ" ಎಂದು ಹೇಳಿದ್ದರು. ಇನ್ನೂ ಮುಂದುವರಿದ ಅವರು, ನಿತೀಶ್ ಅವರು ಬಿಹಾರದಲ್ಲಿ ಕೋಮುವಾದಿ ಜಾತ್ಯತೀತ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದೂ ಟೀಕಿಸಿದ್ದರು.
ಚುನಾವಣಾ ಫಲಿತಾಂಶ ಪ್ರಕಟಣೆಯ ಬಳಿಕ ಅವಶ್ಯಕತೆ ಬಿದ್ದರೆ ನಿತೀಶ್ ಅವರನ್ನು ಸೆಳೆಯುವ ಹವಣಿಕೆಯಲ್ಲಿ, ನಿತೀಶ್‌ರನ್ನು ಹೊಗಳಲು ಆರಂಭಿಸಿದ್ದ ಕಾಂಗ್ರೆಸ್‌ಗೆ ಮೊಯ್ಲಿ ಹೇಳಿಕೆ ಇರಿಸುಮುರಿಸುಂಟುಮಾಡಿದ್ದು, ಇನ್ನಷ್ಟು ಹಾನಿಯನ್ನು ತಪ್ಪಿಸಲು ತಕ್ಷಣ ಜಾಗಖಾಲಿ ಮಾಡಲು ಸೂಚಿಸಲಾಗಿದೆ.
ಇದಲ್ಲದೆ ಕೆಲವು ಸಂದರ್ಭಗಳಲ್ಲಿ ಬಾಯಿಗೆ ಬಂದಂತೆ ಮಾತಾಡುವ ಮೊಯ್ಲಿ ಮಾಧ್ಯಮಗಳ ಎದುರು ಪಕ್ಷವನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲಾಗಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರು ಈ ಹಿಂದೆಯೇ ಅಸಮಾಧಾನಗೊಂಡಿದ್ದರು.
ಮೊಯ್ಲಿ ಅವರ ಸ್ಥಾನವು ಪಕ್ಷದ ಪ್ರಧಾನ ಕಾರ್ಯದರ್ಶಿಗಳಲ್ಲೊಬ್ಬರಾಗಿರುವ ಜನಾರ್ದನ ದ್ವಿವೇದಿ ಅವರಿಗೆ ಧಕ್ಕಿದೆ ಎನ್ನಲಾಗಿದೆ.