ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಇಲ್ಲವೇ ಇಲ್ಲ ಎನ್ನುತ್ತಿದ್ದ ಪ್ರಕಾಶ್ ಕಾರಟ್ ಶನಿವಾರ ರಾಗ ಬದಲಿಸಿದ್ದು, ಕಾಂಗ್ರೆಸ್‌ಗೆ ಹಿತವಾಗುವಂತ ಮಾತುಗಳನ್ನಾಡಿದ್ದು, "ಮೊದಲು ಚುನಾವಣೆಗಳು ಮುಗಿಯಲಿ. ಫಲಿತಾಂಶ ಬರಲಿ. ಮೇ 16ರ ಬಳಿಕ ನಾವು ಈ ಕುರಿತು ಆಲೋಚನೆ ಮಾಡಲಿದ್ದೇವೆ" ಎಂದು ಹೇಳಿದ್ದಾರೆ.
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಚುನಾವಣೆಯ ಬಳಿಕ ಪುನರ್‌ಮೈತ್ರಿಯ ಸಾಧ್ಯತೆ ಇದೆ ಎನ್ನುತ್ತಾ ಜೆಡಿಯು ಮತ್ತು ಎನ್‌ಸಿಪಿಗಳಂತಹ ಪಕ್ಷಗಳು ಎಡಪಕ್ಷಗಳೊಂದಿಗೆ ಸೇರಬೇಕೋ ಬೇಡವೋ ಎಂಬುದಾಗಿ ತೀರ್ಮಾನಿಸಲಿವೆ ಎಂದು ನುಡಿದರು.
ಬಿಜೆಪಿಯು ಚಿತ್ರದಲ್ಲಿರಲು ಸಾಧ್ಯವೇ ಇಲ್ಲ ಎಂದು ನುಡಿದ ಅವರು, ತೃತೀಯ ರಂಗದ ಬೆಂಬಲವಿಲ್ಲದೆ ಯಾರೂ ಸರ್ಕಾರ ರೂಪಿಸಲು ಸಾಧ್ಯವೇ ಇಲ್ಲ ಎಂದು ಭವಿಷ್ಯ ನುಡಿದರು.
ಬಿಜೆಪಿ ಜತೆ ಸೇರುವ ಸಾಧ್ಯತೆಯೇ ಇಲ್ಲ ಎಂದು ನುಡಿದ ಅವರು, ಕೇಂದ್ರದಲ್ಲಿ ಜಾತ್ಯತೀತ ಸರ್ಕಾರವನ್ನು ರೂಪಿಸಲು ಅನುಕೂಲ ಕಲ್ಪಿಸುವ ಕುರಿತು ಕಾಂಗ್ರೆಸ್ ನಿರ್ಧರಿಸಬೇಕಾಗಿದೆ ಎಂದು ಪ್ರಕಾಶ್ ಕಾರಟ್ ಹೇಳಿದರು.