ಮುಂದಿನ ಸರ್ಕಾರದಲ್ಲಿ ಸೇರ್ಪಡೆಗೊಳ್ಳುವಂತೆ ಸ್ವತಹ ಸೋನಿಯಾ ಗಾಂಧಿ ಅವರೇ ಆಹ್ವಾನ ನೀಡಿದರೆ ಮಾತ್ರ ನಾನು ಮತ್ತು ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕಾಂಗ್ರೆಸನ್ನು ಬೆಂಬಲಿಸಲಿದ್ದೇವೆ ಎಂದು ಎಲ್‌ಜೆಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
"ಸೋನಿಯಾಜಿ ಅವರು ಕರೆದರೆ ಮಾತ್ರ ನಾನು ಮತ್ತು ಲಾಲೂ ಅವರು ಕಾಂಗ್ರೆಸನ್ನು ಭೇಟಿಯಾಗಿ ಅದರ ಜತೆ ಕುಳಿತುಕೊಳ್ಳಲಿದ್ದೇವೆ" ಎಂದು ಹೇಳಿರುವ ಪಾಸ್ವಾನ್, ತಮ್ಮ ಕಠಿಣ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹೊಗಳಿರುವ ಕಾಂಗ್ರೆಸ್ ವಿರುದ್ಧ ಈ ಇಬ್ಬರು ನಾಯಕರು ಮುನಿಸಿಕೊಂಡಿದ್ದಾರೆ. ತಮ್ಮ ಸಿಟ್ಟನ್ನು ವ್ಯಕ್ತಪಡಿಸಲು ಇವರು ಶುಕ್ರವಾರ ಮನಮೋಹನ್ ಸಿಂಗ್ ಕರೆದಿದ್ದ ಸಂಪುಟ ಸಭೆಯಲ್ಲೂ ಭಾಗವಹಿಸಿರಲಿಲ್ಲ.
ಚುನಾವಣಾ ಪೂರ್ವ ಮೈತ್ರಿಯ ತಮ್ಮ ನಿಲುವನ್ನು ವ್ಯಕ್ತಪಡಿಸಿರುವ ಪಾಸ್ವಾನ್, ಚುನಾವಣಾ ಪೂರ್ವ ಮೈತ್ರಿ ಸಾಧ್ಯವಿಲ್ಲ. ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕವಷ್ಟೆ ತಮ್ಮ ನಿಲುವನ್ನು ವ್ಯಕ್ತ ಪಡಿಸುವುದಾಗಿ ಅವರು ಹೇಳಿದ್ದಾರೆ.
ಬಿಹಾರದಿಂದ ಎನ್‌ಡಿಎಯನ್ನು ಹೊರದಬ್ಬುವುದು ಮತ್ತು ಉತ್ತರ ಪ್ರದೇಶದಿಂದ ಬಿಜೆಪಿಯನ್ನು ಹೊರ ಹಾಕುವುದು ತಮ್ಮ ಪ್ರಧಾನ ಉದ್ದೇಶವೆಂಬುದಾಗಿ ಲಾಲೂ, ಮುಲಾಯಂ ಸಿಂಗ್ ಯಾದವ್ ಹಾಗೂ ತಾನೂ ಸೇರಿದಂತೆ ತ್ರಿಪಕ್ಷಗಳು ನಿರ್ಧರಿಸಿದ್ದಾಗಿ ಅವರು ನುಡಿದರು.
ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೊಗಳಿದ್ದರಲ್ಲದೇ, ಯುಪಿಎ ಮೈತ್ರಿಕೂಟ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದರು.