ಲೋಕಸಭಾ ಸ್ಪೀಕರ್, ಹೆಡ್‌ಮಾಸ್ಟರ್ ಖ್ಯಾತಿಯ ಸೋಮನಾಥ್ ಚಟರ್ಜಿ ಅವರನ್ನು ಸಿಪಿಎಂಗೆ ಮರಳಿ ಕರೆತರಲು ಪ್ರಯತ್ನಿಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಚಾರ್ಯ ಹೇಳಿದ್ದಾರೆ.
ಬೆಂಗಾಳಿ ಸುದ್ದಿವಾಹಿನಿ ಸ್ಟಾರ್ ಆನಂದಗೆ ನೀಡಿರುವ ಸಂದರ್ಶನದಲ್ಲಿ ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯರಾದ ಬುದ್ಧದೇವ್, ಚಟರ್ಜಿಯವರನ್ನು ಕಳಕೊಂಡಿರುವ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ.
"ಖಂಡಿತವಾಗಿಯೂ ನಾನು ಅವರನ್ನು ರಾಜಕೀಯವಾಗಿ ಕಳೆದುಕೊಂಡಿದ್ದೇನೆ. ಸೋಮನಾಥರಂತ ವ್ಯಕ್ತಿತ್ವದ ನಾಯಕರನ್ನು ಪಕ್ಷದಿಂದ ದೂರ ಇರಿಸಿರುವುದರಿಂದ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ತನಗೆ ತುಂಬ ನೋವಾಗಿದೆ" ಎಂದು ಅವರು ನುಡಿದರು.
ಮಾಜಿ ಸಂಸದ ಸೈಫುದ್ದೀನ್ ಚೌಧುರಿ ಹಾಗೂ ಸೋಮನಾಥ್ ಅವರನ್ನು ಮರಳಿ ಪಕ್ಷಕ್ಕೆ ಕರೆತರುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಪಕ್ಷ ತನ್ನೊಬ್ಬನದಲ್ಲ. ತನ್ನಂತೆಯೇ ಹಲವಾರು ಮಂದಿ ಪಕ್ಷದಲ್ಲಿದ್ದಾರೆ. ಆದರೆ ಹಿರಿಯ ನಾಯಕರನ್ನು ಮತ್ತೆ ಪಕ್ಷಕ್ಕೆ ಮರಳಿ ತರಲು ತಾನು ಪ್ರಯತ್ನಿಸುತ್ತಿರುವುದಾಗಿ ಅವರು ನುಡಿದರು.
ಅಣುಒಪ್ಪಂದವನ್ನು ವಿರೋಧಿಸಿ ಎಡಪಕ್ಷಗಳು ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ವೇಳೆ ಅಲ್ಪಸಂಖ್ಯಾತವಾದ ಮನಮೋಹನ್ ಸಿಂಗ್ ಸರ್ಕಾರ, ಸಂಸತ್ತಿನಲ್ಲಿ ಕಳೆದ ಜುಲೈ 22ರಂದು ವಿಶ್ವಾಸ ಮತ ಯಾಚಿಸಿದಾಗ, ಸ್ಥಾನ ತೆರವು ಗೊಳಿಸುವಂತೆ ಪಕ್ಷವು ಚಟರ್ಜಿಯವರಿಗೆ ಸೂಚಿಸಿತ್ತು. ಆದರೆ ಸ್ಪೀಕರ್ ಆಗಿದ್ದ ಚಟರ್ಜಿ ಸ್ಥಾನತೊರೆಯಲು ನಿರಾಕರಿಸಿದಾಗ ಅವರನ್ನು ಪಕ್ಷವು ಉಚ್ಟಾಟಿಸಿತ್ತು.