ಡಿಎಂಕೆ ಹಾಗೂ ಕಾಂಗ್ರೆಸ್ ನಡುವಿನ ಗಾಢ ಮೈತ್ರಿಯ ಸಾಬೀತಿಗಾಗಿ ಕಾಂಗ್ರೆಸ್ ವರಿಷ್ಠೆ ಪಾಲ್ಗೊಂಡಿದ್ದ ಚುನಾವಣಾ ರ‌್ಯಾಲಿಯಲ್ಲಿ ಡಿಎಂಕೆ ವರಿಷ್ಠ ಕರುಣಾನಿಧಿ ಅವರು ಎಲ್ಟಿಟಿಯನ್ನು ಹೊಗಳಿ ಅಚ್ಚರಿಯುಂಟುಮಾಡಿದರು.
ಮೃತ ಎಲ್ಟಿಟಿಇ ನಾಯಕ ಎಸ್.ಪಿ. ತಮಿಳುಸೆಲ್ವನ್ ಕುರಿತ ತನ್ನ ವಿವಾದಾತ್ಮಕ ಶೋಕಗೀತೆಯ ಕೆಲವು ಸಾಲುಗಳನ್ನು ಕರುಣಾನಿಧಿ ಓದಿದರು. ನವೆಂಬರ್ 2007ರಲ್ಲಿ ಅವರು ರಚಿಸಿದ್ದ ಈ ಗೀತೆಯು ವಿವಾದಕ್ಕೆ ನಾಂದಿಹಾಡಿತ್ತು. ಅವರು ಈ ಪದ್ಯಬರೆದಿದ್ದಾಗ ಎಐಎಡಿಎಂಕೆ ನಾಯಕಿ ಜೆ.ಜಯಲಲಿತಾ ಅವರು ಕರುಣಾನಿಧಿ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿದ್ದರು. ಭಾರತದಲ್ಲಿ ನಿಷೇಧವಾಗಿರುವ ಸಂಘಟನೆಯೊಂದರ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಸರ್ಕಾರವು ವಿಶ್ವಾಸಾರ್ಹತೆ ಕಳೆದುಕೊಂಡಿದೆ ಎಂದು ಹೇಳಿದ್ದರು.
"ಈಗ ಜಯಲಿಲತಾ ತಮಿಳು ಈಳಂನ ಭರವಸೆ ನೀಡುತ್ತಿದ್ದಾರೆ. ಆದರೆ ಶಾಂತಿ ಮಾತುಕತೆಗಳಿಗೆ ಸಂದರ್ಭ ಉದ್ಭವಿಸಿದಾಗ ಆಕೆ ಅದನ್ನು ವಿರೋಧಿಸಿದ್ದರು. ಅವರ ಈ ವಿರೋಧವು ರಾಜ್ಯಪಾಲರು ಸದನದಲ್ಲಿ ಮಾಡಿರುವ ಭಾಷಣದಲ್ಲಿ ಪ್ರಸ್ತಾಪವಾಗಿದೆ" ಎಂದು ಅವರು ನುಡಿದರು.
ಪ್ರತಿಯೊಬ್ಬ ತಮಿಳರಂತೆ ತನಗೂ ಸಹ ಶ್ರೀಲಂಕಾ ತಮಿಳರ ಪರಿಸ್ಥಿತಿ ಗಾಢವಾದ ನೋವುಂಟುಮಾಡಿದೆ ಎಂದು ಹೇಳಿದ ಸೋನಿಯಾ, 1987ರ ಇಂಡೋ-ಶ್ರೀಲಂಕಾ ಒಪ್ಪಂದದ ಪ್ರಕಾರ ಶ್ರೀಲಂಕಾ ತಮಿಳರಿಗೆ ಸಮಾನ ಹಕ್ಕುಗಳು ಮತ್ತು ಸ್ಥಾನಮಾನಗಳು ಲಭ್ಯವಾಗುವಂತೆ ಮಾಡುವುದು ಅಂತಿಮ ಗುರಿ ಎಂದು ಅವರು ನುಡಿದರು.
2004ರ ಚುನಾವಣೆಯಲ್ಲಿ 40ಕ್ಕೆ 40 ಸ್ಥಾನವನ್ನು ಡಿಎಂಕೆ ಗೆದ್ದಿರುವುದು ಯುಪಿಎಗೆ ಸರ್ಕಾರ ರೂಪಿಸಲು ಹೆಚ್ಚಿನ ಸಹಾಯ ಒದಗಿಸಿದೆ ಎಂದು ನುಡಿದ ಸೋನಿಯಾ ಗಾಂಧಿ, ಈ ಬಾರಿಯೂ ಇಂತಹುದೇ ಫಲಿತಾಂಶ ಮರುಕಳಿಸುವಂತೆ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.