ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ತಮಿಳುನಾಡು: ಫೀನಿಕ್ಸ್ ಹಕ್ಕಿ ಆಗಲಿದ್ದಾರೆಯೇ ಜಯಾ?
ಮತಸಮರ
ಎರಡು ಪ್ರಧಾನ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಕೈಗಳಿಗೆ ಒಂದರ ಬಳಿಕ ಮತ್ತೊಂದು ಎಂಬಂತೆ ಪರ್ಯಾಯವಾಗಿಯೇ ಅಧಿಕಾರ ಒಪ್ಪಿಸುವ ಇತಿಹಾಸ ತಮಿಳುನಾಡು ಮತದಾರರದು. ಈ ಬಾರಿ ಕೂಡ ಈ ಇತಿಹಾಸ ಪುನರಾವರ್ತನೆಯಾದರೆ ಅಚ್ಚರಿ ಪಡಬೇಕಿಲ್ಲ.

39 ಕ್ಷೇತ್ರಗಳುಳ್ಳ ತಮಿಳುನಾಡು ಮತ್ತು ಒಂದು ಕ್ಷೇತ್ರವಿರುವ ಪುದುಚೇರಿಯಲ್ಲಿ ಕೊನೆಯ ಸುತ್ತಿನ ಮತದಾನದ ದಿನವಾದ ಮೇ 13ರಂದು ಚುನಾವಣೆ ನಡೆಯಲಿದೆ.

2004ರ ಚುನಾವಣೆಯಲ್ಲಿ, ಹಾಲಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಮುಂದಾಳುತ್ವದ ಡಿಎಂಕೆ ನೇತೃತ್ವದಲ್ಲಿ ಕಾಂಗ್ರೆಸ್, ಸಿಪಿಎಂ, ಸಿಪಿಐ, ಎಂಡಿಎಂಕೆ, ಐಯುಎಂಎಲ್ ಮತ್ತು ಪಿಎಂಕೆ ಒಳಗೊಂಡ ಪ್ರಬಲ ಮಿತ್ರಕೂಟದ ಬಿರುಗಾಳಿಯಲ್ಲಿ ಕೊಚ್ಚಿ ಹೋಗಿದ್ದ ಜಯಲಲಿತಾ ನೇತೃತ್ವದ ಎಐಎಡಿಎಂಕೆ, ಶೂನ್ಯ ಸಂಪಾದನೆ ಮಾಡಿಕೊಂಡಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಅಲೆಯು ಜಯಲಲಿತಾ ಪರವಾಗಿದೆ. ಇದಕ್ಕೆ ಕಾರಣವೆಂದರೆ, ಕಳೆದ ಬಾರಿ ಒಟ್ಟು 14 ಸ್ಥಾನಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದ ಸಿಪಿಐ, ಸಿಪಿಎಂ, ಎಂಡಿಎಂಕೆ ಮತ್ತು ಪಿಎಂಕೆಗಳು ಈ ಬಾರಿ ಜಯಲಲಿತಾರೊಂದಿಗೆ ಕಣಕ್ಕಿಳಿದಿರುವುದು. ಹೀಗಾಗಿಯೇ ಜಯಲಲಿತಾ ಹುಮ್ಮಸ್ಸಿನಲ್ಲಿದ್ದರೆ, ಅವರನ್ನು ಒಲಿಸಿಕೊಳ್ಳುವತ್ತ ಕೇಂದ್ರದಿಂದ ಯುಪಿಎ ಹಾಗೂ ಎನ್‌ಡಿಎ ಪ್ರತಿನಿಧಿಗಳು ಕೂಡ ಆಂತರಿಕ ಸಂಪರ್ಕಗಳನ್ನು ಸಾಧಿಸಿಕೊಳ್ಳುತ್ತಿದ್ದಾರೆ.

ಕರುಣಾನಿಧಿ ಅಸ್ವಸ್ಥರಾಗಿ ಹಾಸಿಗೆ ಹಿಡಿದಿರುವುದು ಡಿಎಂಕೆಯನ್ನು ಮತ್ತಷ್ಟು ಕಂಗಾಲಾಗಿಸಿದೆ. ಅಗ್ನಿನಕ್ಷತ್ರ ಅವಧಿಯಲ್ಲಿ ಬೇಸಗೆಯ ಬಿಸಿಯೇರುತ್ತಿರುವಂತೆಯೇ, ಚುನಾವಣೆಯ ಕಾವು ಕೂಡ ಏರುತ್ತಿದೆ. ಇದರ ನಡುವೆ, ಚುನಾವಣಾ ಆಯೋಗವು ಬ್ಯಾನರುಗಳು, ಪೋಸ್ಟರುಗಳು, ಭಿತ್ತಿಪತ್ರಗಳು ಮತ್ತು ರಾತ್ರಿ 10 ಗಂಟೆ ಮೇಲಿನ ಬಹಿರಂಗ ಪ್ರಚಾರ ಸಭೆಗಳಿಗೆ ಕಡಿವಾಣ ಹಾಕಿದೆ. ಹೆಚ್ಚಿನ ಅಭ್ಯರ್ಥಿಗಳು ರೋಡ್‌ಶೋಗಳಲ್ಲೇ ತೃಪ್ತರಾಗುತ್ತಿದ್ದಾರೆ. ಅತ್ತ ಶ್ರೀಲಂಕಾದಲ್ಲಿ ಎಲ್ಟಿಟಿಇ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್‌ನನ್ನು ಶ್ರೀಲಂಕಾ ಪಡೆಗಳು ಸುತ್ತುವರಿದು, ಎಲ್ಟಿಟಿಇಯನ್ನು ನಿರ್ನಾಮ ಮಾಡಲು ಸರ್ವರೀತಿಯಲ್ಲಿಯೂ ಸಜ್ಜಾಗುತ್ತಿರುವಂತೆಯೇ, ಲಂಕಾ ತಮಿಳರ ವಿಚಾರವೂ ರಾಜಕೀಯ ಕಾವು ಪಡೆದುಕೊಂಡು ಚುನಾವಣಾ ವಿಷಯವಾಗಿಬಿಟ್ಟಿದೆ.

ಎಂಡಿಎಂಕೆ ಮತ್ತು ಪಿಎಂಕೆಗಳ ಎಲ್ಟಿಟಿಇ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದಿರುವಂಥದ್ದು. ಎಐಎಡಿಎಂಕೆ ಮತ್ತು ಎಡಪಕ್ಷಗಳು ಕೂಡ ಅವುಗಳತ್ತ ವಾಲಿವೆ. ಇದರೊಂದಿಗೆ, ರಾಜ್ಯದಲ್ಲಿನ ಈ ವಿರೋಧ ಪಕ್ಷಗಳು ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟಕ್ಕಿಂತ ಒಂದು ಕೈ ಮೇಲೆಯೇ ಇವೆ. ಹೀಗಾಗಿ ಎರಡೂ ಪಕ್ಷಗಳಿಂದ ಪ್ರತ್ಯೇಕ ತಮಿಳು ರಾಷ್ಟ್ರ ಸ್ಥಾಪನೆಯ ಬದ್ಧತೆ ಪ್ರದರ್ಶನಗೊಂಡಿದೆ.

ಚುನಾವಣೆ ಕಾರಣಕ್ಕಾಗಿಯೇ ಎಲ್ಟಿಟಿಇಯ ಬದ್ಧವಿರೋಧಿಯಾಗಿದ್ದ, ಯಾವತ್ತಿಗೂ ಎಲ್ಟಿಟಿಇಯಿಂದ ಜೀವ ಬೆದರಿಕೆ ಎದುರಿಸುತ್ತಲೇ ಇರುವ ಜಯಲಲಿತಾ ಕೂಡ, ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ಈಳಂ ಸ್ಥಾಪನೆಗೆ ಒತ್ತು ಕೊಟ್ಟಿದ್ದಾರೆ. ಮತಗಳು ಅತ್ತಕಡೆ ವಾಲುವ ಸಾಧ್ಯತೆಗಳಿಂದ ಕಳವಳಗೊಂಡ ಕರುಣಾನಿಧಿ, ದಿಢೀರ್ ಆಗಿ ಮರೀನಾ ಬೀಚ್‌ನಲ್ಲಿ ಉಪವಾಸ ಕೈಗೊಂಡು 'ಶ್ರೀಲಂಕಾ ತಮಿಳರ ರಕ್ಷಣೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುವಂತೆ' ಒತ್ತಡ ಹೇರಿದ್ದಾರೆ. ಮಾತ್ರವಲ್ಲ, ಅತ್ತ ಕಡೆಯಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನೂ ಕರೆಸಿಕೊಂಡು, ಅವರ ಪತಿ ರಾಜೀವ್ ಗಾಂಧಿಯನ್ನು ಎಲ್ಟಿಟಿಇ ಕೊಂದಿದ್ದೆಂಬುದು ಅರಿವಿದ್ದರೂ, ಒಂದೇ ವೇದಿಕೆಯಲ್ಲಿ ಶ್ರೀಲಂಕಾ ತಮಿಳರ ಪರವಾಗಿ ಎಂಬುದರ ನೆಪದಲ್ಲಿ ಎಲ್ಟಿಟಿಇ ಪರ ಅಲೆಯನ್ನೂ ಸೃಷ್ಟಿಸಿಕೊಂಡರು.

ಈ ಮೈತ್ರಿಕೂಟಗಳ ಬದ್ಧವೈರದ ಕದನದ ನಡುವೆ, 'ಕಪ್ಪು ಎಂಜಿಆರ್' ಎಂದೇ ಕರೆಯಲ್ಪಡುವ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಖ್ಯಾತ ನಟ ಎಂಜಿಆರ್ ಅವರ ಶೈಲಿಯನ್ನು ಚಲನಚಿತ್ರದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲೂ ಅಳವಡಿಸಿಕೊಳ್ಳುತ್ತಿರುವ ವಿಜಯಕಾಂತ್ ನೇತೃತ್ವದ ಎಂಡಿಎಂಕೆ ಕೂಡ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಪ್ರಮುಖ ಪಕ್ಷಗಳ ಹಲವು ಅಭ್ಯರ್ಥಿಗಳ ಭವಿಷ್ಯಕ್ಕೆ ಮುಳುವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಎಂಡಿಎಂಕೆ ಈಗ ಶೇ.8 ಓಟಿನ ಪಾಲನ್ನು ಹೊಂದಿದ್ದು, ಅದನ್ನು ಕನಿಷ್ಠ ಶೇ.10ಕ್ಕೆ ಏರಿಸಿಕೊಳ್ಳುವ ಗುರಿ ವಿಜಯಕಾಂತ್ ಅವರದು. ಓಟಿನ ಪಾಲು ಹೆಚ್ಚಿಸಿಕೊಂಡರೆ, ಅದು ಅಸೆಂಬ್ಲಿ ಚುನಾವಣೆಗೆ ಪೂರಕವಾದೀತು ಎಂಬ ಲೆಕ್ಕಾಚಾರ ಇದರ ಹಿಂದಿದೆ.

ಒಟ್ಟಿನಲ್ಲಿ ಮೇ 13ರಂದು ನಡೆಯುವ ಚುನಾವಣೆಯಲ್ಲಿ ಅಲೆಯು ಎಐಎಡಿಎಂಕೆ ಪರವಾಗಿದೆ. ಕನಿಷ್ಠ 25 ಸ್ಥಾನಗಳನ್ನು ಈ ಮೈತ್ರಿಕೂಟ ಗೆಲ್ಲುವ ಬಗ್ಗೆ ಚುನಾವಣಾ ವಿಶ್ಲೇಷಕರು ಲೆಕ್ಕಾಚಾರ ಹಾಕುತ್ತಾರೆ.