ನಿತೀಶ್ ಕುಮಾರ್ ಅವರನ್ನು ಒಬ್ಬ ಜಾತ್ಯತೀತ ವ್ಯಕ್ತಿ ಎಂದು ಬಣ್ಣಿಸಿದ್ದ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾವದ್ ಅವರು, ಬಿಹಾರದ ಮುಖ್ಯಮಂತ್ರಿಯು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಬಳಿಕ ಅವರ 'ಜಾತ್ಯತೀತ ಮುಖವಾಡ'ದ ಬಣ್ಣವು ಬಯಲಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
"ನಿತೀಶ್ ಯಾವಾಗಲೂ ಹೇಳೊದೊಂದು ಮಾಡೋದೊಂದು. ಅವರೊಬ್ಬ ಗೊಂದಲಕಾರಿ ವ್ಯಕ್ತಿ. ನಿತೀಶ್ ಅವರಿಗೆ ಜಾತ್ಯತೀತ ಎಂಬ ಸರ್ಟಿಫಿಕೇಟ್ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯಂತಹವರಿಗೆ ಈಗ ನಿತೀಶ್ ಏನೆಂಬ ಅರಿವಾಗಿರಬಹುದು" ಎಂಬುದಾಗಿ ಪಾಟ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಲಾಲೂ ಹೇಳಿದ್ದಾರೆ,
"ನಿತೀಶ್ ಅವರು ನವದೆಹಲಿಯಲ್ಲಿ ನಡೆದ ಎನ್‌ಡಿಎ ರ‌್ಯಾಲಿಯಲ್ಲಿ ಭಾಗವಹಿಸಲು ನಿರಾಕರಿಸಿದ್ದರು. ತಾನು ಮೋದಿಯೊಂದಿಗೆ ವೇದಿಕೆ ಹಂಚಿಕೊಳ್ಳಲು ತಯಾರಾಗಿಲ್ಲ ಎಂದು ಹೇಳಿದ್ದರು. ಆದರೆ ಬಿಹಾರದಲ್ಲಿ ಯಾವಾಗ ಚುನಾವಣೆಗಳು ಮುಗಿಯಿತೋ ನಿತೀಶ್ ತನ್ನ ನೈಜ ಬಣ್ಣವನ್ನು ಬಿಚ್ಚಿಟ್ಟಿದ್ದಾರೆ ಎಂದು ಲಾಲೂ ದೂರಿದರು. ನಾಲ್ಕನೆ ಹಂತದ ಚುನಾವಣೆ ಬಳಿಕ ಲಾಲೂ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿರುವುದು ಇದೇ ಪ್ರಥಮವಾಗಿದೆ.
ಚುನಾವಣೆ ವೇಳೆ ತನ್ನ ಬಗ್ಗೆ ಮಾಧ್ಯಮಗಳು ಕೆಟ್ಟ ಪ್ರಚಾರ ನೀಡಿವೆ ಎಂದು ಮುನಿಸಿಕೊಂಡಿದ್ದ ಲಾಲೂ, ಮಾಧ್ಯಮಗಳು ಅವರನ್ನು ಕೆದಕಿದ್ದರೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಚುನಾವಣೆ ದಿನವೂ ಮತದಾನದ ಬಳಿಕ ಮಾಧ್ಯಮಗಳತ್ತ ಮುಖ ತಿರುವಿ ನಡೆದಿದ್ದರು.
ಭಾನುವಾರ ಲೂಧಿಯಾನದಲ್ಲಿ ನಡೆದ ಎನ್‌ಡಿಎ ಬೃಹತ್ ರ‌್ಯಾಲಿಯಲ್ಲಿ ನಿತೀಶ್ ಕುಮಾರ್ ಹಾಗೂ ಮೋದಿ ಪರಸ್ಪರ ಕೈಕುಲುಕಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಮೋದಿ ಅವರು ಬಿಹಾರದಲ್ಲಿ ನಿತೀಶ್ ಅವರು ಮಾಡಿರುವ ಕೃಷಿ ಕ್ರಾಂತಿಯನ್ನು ಹೊಗಳಿದ್ದರು.