ಮೇ 16ರಿಂದ ಸರಕಾರ ಪ್ರಕ್ರಿಯೆ ಕೈಗೆತ್ತಿಕೊಳ್ಳಲಿರುವ ಸೋನಿಯಾ
ನವದೆಹಲಿ, ಮಂಗಳವಾರ, 12 ಮೇ 2009( 15:45 IST )
15ನೇ ಲೋಕಸಭೆಗೆ ನಡೆಯುವ ಚುನಾವಣೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿಬರಲಿದೆ ಎಂಬ ನಂಬಿಕೆಯಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಹೊಸ ಸರಕಾರ ರಚನೆ ಪ್ರಕ್ರಿಯೆಯ ಹೊಣೆಯನ್ನು ಮೇ 16ರಂದು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ.
ಯುಪಿಎ ಅಧ್ಯಕ್ಷೆಯೂ ಆಗಿರುವ ಸೋನಿಯಾ, ಪಕ್ಷದ ಮೈತ್ರಿ-ಮಾತುಕತೆ ತಂಡದ ನೇತೃತ್ವ ವಹಿಸಲಿದ್ದಾರೆ. 2004ರ ಚುನಾವಣೆ ಬಳಿಕ ಯುಪಿಎ ರಚನೆಯಲ್ಲಿ ಕೂಡ ಅವರು ಇದೇ ಪಾತ್ರ ನಿರ್ವಹಿಸಿದ್ದರು.
ಎಲ್ಲ ಮಿತ್ರಪಕ್ಷಗಳು ಮತ್ತು ಸಂಭಾವ್ಯ ಮಿತ್ರ ಪಕ್ಷಗಳ ಮುಖಂಡರು ಕೇವಲ ಒಂದು ದೂರವಾಣಿ ಕರೆ ಮೂಲಕ ಸೋನಿಯಾ ಗಾಂಧಿ ಅವರಿಗೆ ಲಭ್ಯರು. ಆಕೆ ಅವರೆಲ್ಲರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಯುಪಿಎ-ಯೇತರ ಮಿತ್ರ ಪಕ್ಷಗಳನ್ನು ಓಲೈಸುವ ರಾಹುಲ್ ಗಾಂಧಿ ಪ್ರಯತ್ನಕ್ಕೆ ಯುಪಿಎ ಮಿತ್ರಕೂಟದಲ್ಲಿ ಅಸಮಾಧಾನ ಈಗಾಗಲೇ ಹೊರಹೊಮ್ಮಿರುವುದರಿಂದಾಗಿ ಅವರು ಈ ಕುರಿತು ಬಾಯಿ ತೆರೆಯದಿರುವ ಸಾಧ್ಯತೆಯಿದೆ.
ಜೆಡಿಯು ಮುಖಂಡ, ಎನ್‌ಡಿಎಯ ಪ್ರಧಾನ ಮಿತ್ರನಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎಷ್ಟೇ ನಿರಾಕರಿಸಿದರೂ, ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಅವರೇ ಎಂಬುದು ಕಾಂಗ್ರೆಸ್‌ನ ಒಂದು ವರ್ಗದ ಬಲವಾದ ನಂಬಿಕೆ.
ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನದ ಬಗ್ಗೆ ಯಾವುದೇ ಚೌಕಾಶಿ ಇಲ್ಲ ಎಂದು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಹಲವು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದರೂ, ಪಕ್ಷಕ್ಕೆ ಸಾಕಷ್ಟು ಸಂಖ್ಯಾಬಲ ಬಂದರೆ ಮಾತ್ರವೇ ಈ ನಿಲುವಿಗೆ ಎಐಸಿಸಿ ಬದ್ಧವಾಗಬಹುದು ಎಂಬುದು ಪಕ್ಷದ ಮೂಲಗಳ ಬಲವಾದ ನಂಬಿಕೆ.