ಚುನಾವಣೆ08 | ಮತಸಮರ | ಚುನಾವಣೆ ನಕ್ಷೆ | ಫಲಿತಾಂಶ 09
ಮುಖ್ಯ ಪುಟ ಸುದ್ದಿ ಜಗತ್ತು  ಚುನಾವಣೆ  ಮತಸಮರ > ಎನ್‌ಡಿಎ, ಯುಪಿಎಯಿಂದ ಮಿತ್ರರ ಬೇಟೆ, ಓಲೈಕೆ
ಮತಸಮರ
ಈ ಮಹಾ ಚುನಾವಣೆಗಳು ಮತ್ತೊಂದು ಬಾರಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯದ ಮೇಲೆ ಬೆಳಕು ಚೆಲ್ಲುತ್ತಿವೆ. ಪ್ರಾದೇಶಿಕ ಪಕ್ಷಗಳ ಕಣ್ಣಾಮುಚ್ಚಾಲೆಯಾಟದ ನಡುವೆ, ಕೇಂದ್ರದಲ್ಲಿ ಅಧಿಕಾರ ಸ್ಥಾಪಿಸಲು ತಮ್ಮ ತಮ್ಮ ಮಿತ್ರಪಕ್ಷಗಳನ್ನು ಕೂಟದಲ್ಲಿ ಗಟ್ಟಿಯಾಗಿ ಇರಿಸಿಕೊಳ್ಳುವುದು ಕಾಂಗ್ರೆಸ್ ಹಾಗೂ ಬಿಜೆಪಿಗಳಿಗೆ ತಲೆನೋವಿನ ಸಂಗತಿಯಾಗಿದೆ.

ಸದ್ಯಕ್ಕೆ ಎನ್‌ಡಿಎಯಲ್ಲಿರುವ ಸಂಯುಕ್ತ ಜನತಾ ದಳ (ಜೆಡಿಯು) ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರತ್ತ ಯುಪಿಎ ಕಣ್ಣು ಹರಿಸಿದ್ದು, ಚಂದ್ರಬಾಬು ನಾಯ್ಡು ಅವರನ್ನು ಹೊಗಳಿದ್ದು, ಅತ್ತಕಡೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾರನ್ನು ಸಂಪರ್ಕಿಸಿದ್ದು ಎಲ್ಲವೂ ಹೊಸ ಸರಕಾರ ರಚನೆಯ ಕಸರತ್ತಿನ ಭಾಗವಾಗಿತ್ತು. ಆದರೆ ಅದನ್ನೆಲ್ಲವನ್ನೂ ಕಾಂಗ್ರೆಸ್ ಈಗ ನಿರಾಕರಿಸುತ್ತಿದೆ. ಅಂದರೆ ಜೆಡಿಯು, ಟಿಡಿಪಿ ಮತ್ತು ಎಐಎಡಿಎಂಕೆಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನದಿಂದ ಕಾಂಗ್ರೆಸ್ ಸ್ವಲ್ಪ ದೂರವಾದಂತೆ ಕಂಡುಬಂದಿದೆ.

ಮೊನ್ನೆ ಮೊನ್ನೆವರೆಗೂ ಜಯಲಲಿತಾರತ್ತ ಒಂದು ಕಣ್ಣಿಟ್ಟಿದ್ದ ಕಾಂಗ್ರೆಸ್, ಇತ್ತೀಚೆಗೆ ಸೋನಿಯಾ ಗಾಂಧಿಯವರು ಡಿಎಂಕೆ ವೇದಿಕೆಯಲ್ಲಿ ಕಾಣಿಸಿಕೊಂಡ ಬಳಿಕ ಎಐಎಡಿಎಂಕೆಯನ್ನು ದೂರೀಕರಿಸಿದೆ ಮತ್ತು ಡಿಎಂಕೆ ನಮ್ಮ ಮಿತ್ರ ಮತ್ತು ಅದರ ಮಿತ್ರತ್ವ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಇರುವ ಬದ್ಧ ರಾಜಕೀಯ ವೈರ ಸರ್ವರಿಗೂ ತಿಳಿದಿರುವಂಥದ್ದೇ.

ಮತ್ತೊಂದೆಡೆ, ಆಂಧ್ರಪ್ರದೇಶದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ಅವರ ಪ್ರಜಾರಾಜ್ಯಂ ಮನವೊಲಿಕೆಗೆ ಕಾಂಗ್ರೆಸ್ ಮತ್ತು ಟಿಡಿಪಿಗಳೆರಡೂ ತೀವ್ರ ಕಸರತ್ತು ನಡೆಸುತ್ತಿವೆ. ಅಲ್ಲಿ ವಿದಾನಸಭೆ ಚುನಾವಣೆಗಳೂ ನಡೆಯುತ್ತಿದ್ದು, ಚಿರಂಜೀವಿಯೇನಾದರೂ ಒಂದಷ್ಟು ಸಂಖ್ಯಾಬಲ ಪಡೆದುಕೊಂಡರೆ, ಅವರೇ ಮುಖ್ಯಮಂತ್ರಿಯಾದರೂ ಅಚ್ಚರಿಪಡಬೇಕಾಗಿಲ್ಲ. ಇದಕ್ಕೆ ಕಾರಣವೆಂದರೆ ಟಿಡಿಪಿ ಮ್ತತು ಕಾಂಗ್ರೆಸ್‌ಗಳ ಮಧ್ಯೆ ಇರುವ ವೈರ ಮತ್ತು ಎರಡೂ ಪಕ್ಷಗಳು ಸ್ವಂತ ಬಲದಲ್ಲಿ ಅಧಿಕಾರಕ್ಕೇರುವ ಕ್ಷೀಣ ಸಾಧ್ಯತೆ.

ಇವು ಕಾಂಗ್ರೆಸ್ ನೇತೃತ್ವದ ಯುಪಿಎ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಕಥೆಯಾದರೆ, ಮತ್ತೊಂದೆಡೆಯಿಂದ ಎಡಪಕ್ಷಗಳು ಕೂಡ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸರಕಾರ ಸ್ಥಾಪನೆಯ ಯತ್ನಗಳಿಂದ ಹಿಂದುಳಿದಿಲ್ಲ. ಎಡ ರಂಗದಿಂದ ವೈರುಧ್ಯಮಯ ಹೇಳಿಕೆಗಳು ಬರುತ್ತಲೇ ಇವೆ. ನಾವು ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರಕಾರ ರಚಿಸುತ್ತೇವೆ ಎಂದು ಒಂದು ಕಡೆಯಿಂದ ಧ್ವನಿ ಕೇಳಿಬಂದರೆ, ನಾವು ಬಿಜೆಪಿ ಹೊರಗಿಡುವುದಕ್ಕಾಗಿ ಕಾಂಗ್ರೆಸ್‌ಗೆ ಬೆಂಬಲಿಸಲು ಮುಕ್ತರಾಗಿದ್ದೇವೆ ಎಂಬ ಮತ್ತೊಂದು ಧ್ವನಿ ಕೇಳಿಬರುತ್ತದೆ. ತೃತೀಯ ರಂಗವೇ ಸರಕಾರ ಸ್ಥಾಪಿಸುತ್ತದೆ, ಅದಕ್ಕೆ ಕಾಂಗ್ರೆಸ್ ಬೆಂಬಲಿಸಬೇಕು ಎಂಬ ಮಗದೊಂದು ಧ್ವನಿಯೂ ಹೊಮ್ಮುತ್ತಿದೆ.

ಆ ಕಡೆಯಿಂದ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವು ಕೂಡ ಒಂದು ಕಾಲು ಅತ್ತ, ಮತ್ತೊಂದು ಕಾಲು ಇತ್ತ ನೆಟ್ಟು ಕುತೂಹಲ ಮೂಡಿಸುತ್ತಿದೆ. ಫಲಿತಾಂಶ ನೋಡಿ ತಕ್ಕ ತೀರ್ಮಾನ ಕೈಗೊಳ್ಳುತ್ತೇವೆ, ಅದುವರೆಗೆ ಯಾವುದೇ ರಂಗದಲ್ಲಿ ನಾವಿಲ್ಲ ಎಂದಿದ್ದಾರೆ ಬಿಜೆಡಿ ಮುಖಂಡ ವೈಜಯಂತ್ ಜಯ್ ಪಾಂಡ. ಆದರೆ ಬಿಜೆಡಿಯು ಮರಳಿ ಎನ್‌ಡಿಎ ತೆಕ್ಕೆಗೆ ಬರುತ್ತದೆ ಎಂಬುದು ಬಿಜೆಪಿಯೊಳಗಿನವರ ವಿಶ್ವಾಸ.

ಇದುವರೆಗಿನ ಪರಿಸ್ಥಿತಿಗಳನ್ನು ನೋಡಿದರೆ, ಚುನಾವಣೋತ್ತರ ಕಾಲದಲ್ಲಿ ಅತಂತ್ರ ಜನಾದೇಶವು ನಿಖರವಾಗಿ ಗೋಚರಿಸುವ ಈ ಸಂದರ್ಭದಲ್ಲಿ, ಎನ್‌ಡಿಎ ಒಂದು ತೃಣ ಮಾತ್ರದಷ್ಟು ಯುಪಿಎಗಿಂತ ಮುಂದಿರುವಂತೆ ತೋರುತ್ತಿದೆ. ಆದರೆ ಚುನಾವಣೆಗೆ ಮುನ್ನ ಶತ್ರುಗಳಾಗಿದ್ದವರೆಲ್ಲರೂ ಚುನಾವಣೋತ್ತರ ಕಾಲದಲ್ಲಿ ಅಧಿಕಾರ ಕುರ್ಚಿ ನೋಡಿದ ತಕ್ಷಣ ಮಿತ್ರರಾಗುವ ಪರಿಸ್ಥಿತಿ ಇರುವಾಗ ಯಾರ್ಯಾರು ಯಾವ ಮೈತ್ರಿಕೂಟದಲ್ಲಿರುತ್ತಾರೆ ಎಂಬುದು ಸ್ಪಷ್ಟವಾಗುವುದು ಮೇ 16ರ ನಂತರವೇ.