ಲೋಕಸಭಾ ಮಹಾಚುನಾವಣೆಯ ಐದನೇ ಹಾಗೂ ಅಂತಿಮ ಹಣಾಹಣಿ ಬುಧವಾರ ಬೆಳಿಗ್ಗೆ ಮತದಾನ ಆರಂಭವಾಗುವ ಮೂಲಕ ಘಟಾನುಘಟಿಗಳ ಹಣೆಬರಹವನ್ನು ಮತದಾರರು ನಿರ್ಧರಿಸಲಿದ್ದಾರೆ.
ಏಪ್ರಿಲ್ 16ರಿಂದ ಆರಂಭವಾಗಿರುವ ಮತ ಸಮರ ನಾಳೆ ಮುಕ್ತಾಯ ಕಾಣಲಿದೆ. ಈವರೆಗೆ ನಡೆದ ಮತದಾನದಲ್ಲಿ ಹಲವೆಡೆ ಹಿಂಸಾಚಾರ ನಡೆದಿದ್ದು, ಒಟ್ಟಾರೆಯಾಗಿ ಶಾಂತಿಯುತವಾಗಿಯೇ ಮತದಾನ ನಡೆದಿತ್ತು.
PTI
ಬುಧವಾರ ನಡೆಯಲಿರುವ ಅಂತಿಮ ಹಂತದ ಅಖಾಡದಲ್ಲಿ 87ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್‌ನ ಪಿ.ಚಿದಂಬರಂ, ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಮಣಿಶಂಕರ್ ಅಯ್ಯರ್, ಸಜ್ಜಾದ್ ಗನಿ ಲೋನೆ, ಬಿಜೆಪಿಯ ಮನೇಕಾ ಗಾಂಧಿ, ಪಿಲಿಫಿಟ್ ಕ್ಷೇತ್ರದ ವರುಣ್ ಗಾಂಧಿ, ಮುಕ್ತಾರ್ ಅಬ್ಬಾಸ್ ನಕ್ವಿ, ಡಿಎಂಕೆಯ ಟಿ.ಆರ್.ಬಾಲು, ಎ.ರಾಜಾ, ದಯಾನಿಧಿ ಮಾರನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಪುತ್ರ ಎಂ.ಕೆ.ಅಳಗಿರಿ, ಎಂಡಿಎಂಕೆಯ ವೈಕೋ, ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಜಯಪ್ರದಾ ಸೇರಿದಂತೆ 1432 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 10ಕೋಟಿಗ ಅಧಿಕ ಮತದಾರರು ನಿರ್ಧರಿಸಲಿದ್ದಾರೆ.
545 ಸದಸ್ಯ ಬಲದ ಲೋಕಸಭೆಯಲ್ಲಿ ಸರ್ಕಾರ ರಚಿಸಲು ಒಂದು ಪಕ್ಷ ಅಥವಾ ಮೈತ್ರಿ ಕೂಟಕ್ಕೆ 272 ಮ್ಯಾಜಿಕ್ ಸಂಖ್ಯೆಯ ಸ್ಥಾನಗಳ ಅಗತ್ಯವಿದೆ. ಆಂಗ್ಲೋ ಇಂಡಿಯನ್ ಸಮುದಾಯದಿಂದ ಇಬ್ಬರು ಸದಸ್ಯರನ್ನು ನಾಮಕರಣ ಮಾಡುವುದರಿಂದ ಒಟ್ಟು 543ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿವೆ. ಮೇ 16ರಂದು ನಡೆಯಲಿರುವ ಮತಎಣಿಕೆ ಈ ಎಲ್ಲಾ ಕುತೂಹಲಕ್ಕೆ ಅಂತಿಮ ತೆರೆ ಎಳೆಯಲಿದೆ.
PTI
ಆಡಳಿತಾರೂಢ ಯುಪಿಎ ಅಧಿಕಾರಕ್ಕೆ ಮತ್ತೆ ಬರುವುದೋ ಅಥವಾ ಬಹುಪಕ್ಷಗಳ ಎನ್‌ಡಿಎ ಮರಳಿ ಅಧಿಕಾರದ ಗದ್ದುಗೆ ಏರುತ್ತೋ ಇಲ್ಲವೇ ತೃತೀಯರಂಗ ಅವೆರಡನ್ನೂ ಮೀರಿ ಅಚ್ಚರಿ ಫಲಿತಾಂಶ ಬರುತ್ತದೋ ಎಂಬುದನ್ನು ಕಾದು ನೋಡಬೇಕಾಗಿದೆ.
ತಮಿಳುನಾಡಿನ 39 ಕ್ಷೇತ್ರ, ಹಿಮಾಚಲ ಪ್ರದೇಶದಲ್ಲಿ 04, ಜಮ್ಮು-ಕಾಶ್ಮೀರ-02, ಪಂಜಾಬ್-09, ಉತ್ತರ ಪ್ರದೇಶ-14, ಪಶ್ಚಿಮಬಂಗಾಲ-11, ಉತ್ತರಖಂಡ್-05, ಚಂಡೀಗಢ್-01, ಪಾಂಡಿಚೇರಿ-01 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಎಲ್ಲೆಡೆ ಸರ್ಪಗಾವಲು: ಬುಧವಾರ ನಡೆಯಲಿರುವ ಅಂತಿಮ ಹಂತದ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ನಾಳೆ ಏಳು ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯಲಿದೆ.
ಮತಗಟ್ಟೆಗಳ ಬಳಿ ರಾಜ್ಯ ಪೊಲೀಸ್ ಪಡೆಗಳಿಗೆ ಸಹಕರಿಸಲು ಗರಿಷ್ಠ ಭದ್ರತೆ ಒದಗಿಸಲು ಅರೆಸೇನಾ ಪಡೆಗಳಿಗೆ ಗೃಹ ಇಲಾಖೆ ಈಗಾಗಲೇ ಸೂಚಿಸಿದೆ. ಈ ಹಂತದಲ್ಲಿ ಒಟ್ಟು 1.21ಲಕ್ಷ ಮತಗಟ್ಟೆಗಳಿದ್ದು, 10.78ಕೋಟಿ ಮತದಾರರನ್ನು ಹೊಂದಿದೆ.