ಸರಕಾರ ನಿರ್ಣಯಿಸುವ ಅಂತಿಮ ಹಂತದ ಮತದಾನ ನವದೆಹಲಿ, ಬುಧವಾರ, 13 ಮೇ 2009( 10:10 IST ) | |
ಕೇಂದ್ರದಲ್ಲಿ ಅಧಿಕಾರಕ್ಕೇರುವ ಚುಕ್ಕಾಣಿ ಇದೆ ಎಂದೇ ನಂಬಲಾಗಿರುವ ತಮಿಳುನಾಡು ಸೇರಿದಂತೆ ದೇಶದ 86 ಲೋಕಸಭಾ ಕ್ಷೇತ್ರಗಳಿಗೆ 2009ರ ಐದನೇ ತಥಾ ಅಂತಿಮ ಹಂತದ ಮತದಾನ ಬುಧವಾರ ಬೆಳಿಗ್ಗೆ ಆರಂಭವಾಗಿದ್ದು, ಮಂದಗತಿಯಿಂದ ಚಾಲನೆ ದೊರೆತಿದೆ.
ಪಿ.ಚಿದಂಬರಂ, ಮಮತಾ ಬ್ಯಾನರ್ಜಿ, ದಯಾನಿಧಿ ಮಾರನ್, ವರುಣ್ ಗಾಂಧಿ ಹಾಗೂ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರ ಪುತ್ರ ಅಳಗಿರಿಯವರ ಚುನಾವಣಾ ಭವಿಷ್ಯಗಳು ಇಂದು ಮತಪೆಟ್ಟಿಗೆಯಲ್ಲಿ ಭದ್ರವಾಗುತ್ತಿವೆ.
ಅಂತಿಮ ಹಂತದ 86 ಸ್ಥಾನಗಳಿಗೆ 1432 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಕ್ರಿಕೆಟಿಗ ಮಹಮದ್ ಅಜರುದ್ದೀನ್, ಬಿಜೆಪಿಯ ಮನೇಕಾ ಗಾಂಧಿ, ಮುಖ್ತಾರ್ ಅಬ್ಬಾಸ್ ನಖ್ವಿ, ಡಿಎಂಕೆಯ ಟಿ.ಆರ್.ಬಾಲು, ಎ.ರಾಜಾ, ಎಂಡಿಎಂಕೆಯ ವೈಕೋ, ಎಸ್ಪಿಯ ಜಯಪ್ರದಾ ಮುಂತಾದವರು ಅದೃಷ್ಟಪರೀಕ್ಷೆಯ ಪಟ್ಟಿಯಲ್ಲಿದ್ದಾರೆ.
ತಮಿಳುನಾಡಿನ 30, ಪುದುಚೇರಿಯ 1, ಹಿಮಾಚಲ ಪ್ರದೇಶದ 4, ಜಮ್ಮು ಮತ್ತು ಕಾಶ್ಮೀರದ 2, ಪಂಜಾಬಿನ 9, ಉತ್ತರ ಪ್ರದೇಶದ 14, ಪಶ್ಚಿಮ ಬಂಗಾಳದ 11, ಉತ್ತರಾಖಂಡದ 5 ಮತ್ತು ಚಂಡೀಗಢದಲ್ಲಿ 1 ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ಜಾರಿಯಲ್ಲಿದೆ.
ಮತ ಎಣಿಕೆ ಮೇ 16ರಂದು ದೇಶಾದ್ಯಂತ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಮುಂದಿನ ಸರಕಾರ ರಚನೆಯ ಸಾಧ್ಯಾಸಾಧ್ಯತೆಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ.